ಬೆಂಗಳೂರು: ಕಾಂಗ್ರೆಸ್ಸಿನ ಮಹಿಳಾ ವಿರೋಧಿ ಕ್ರಮದಿಂದ ಮುಂದಿನ ದಿನಗಳಲ್ಲಿ ಆ ಪಕ್ಷಕ್ಕೆ ಮುಖಭಂಗ ಆಗಲಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಇಂದು ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಜೀ ಅವರು ಹೇಳುವ ಘೋಷವಾಕ್ಯ ‘ಸಬ್ ಕಾ ಸಾಥ್…’ ಸತ್ಯ ಎಂದು ಎಲ್ಲರಿಗೂ ಮನವರಿಕೆ ಆಗಿರಬೇಕು ಎಂದು ವಿಶ್ಲೇಷಿಸಿದರು.
ಇಂಡಿ ಒಕ್ಕೂಟದ ಬ್ರದರ್ಸ್‍ಗೆ ಸಿಸ್ಟರ್‍ಗಳ ಬಗ್ಗೆ ಗೌರವ ಇಲ್ಲ ಎಂದು ಟೀಕಿಸಿದರು. ಕುತಂತ್ರದಿಂದ ಮಹಿಳಾ ಮೀಸಲಾತಿ ಮಸೂದೆಗೆ ಸೋಲಾಗಿದೆ. ದಲಿತರು, ಹಿಂದುಳಿದವರನ್ನು, ಮುಸ್ಲಿಂ ಹೆಣ್ಮಕ್ಕಳನ್ನು ಕಾಂಗ್ರೆಸ್ ಪಕ್ಷ ಶೋಷಣೆ ಮಾಡಿತ್ತು ಎಂದು ಆಕ್ಷೇಪಿಸಿದರು. ಕಾಂಗ್ರೆಸ್ ಪಕ್ಷ ಇರುವುದೇ ದೇಶವನ್ನು ಪೋಷಣೆ ಮಾಡಲಿಕ್ಕಲ್ಲ. ಶೋಷಣೆ ಮಾಡಲಿಕ್ಕೆ ಎಂಬುದು ಸ್ಪಷ್ಟವಾಗಿ ಗೊತ್ತಾಗಿದೆ ಎಂದರು.
ಶೇ 50ರಷ್ಟಿರುವ ಮಹಿಳೆಯರಿಗೆ ಮೀಸಲಾತಿ ಕೊಡುವ ಕಾಂಗ್ರೆಸ್ ಪ್ರಯತ್ನವು ‘ತೊಟ್ಟಿಲು ತೂಗುವುದೂ ಅವರೇ.. ಮಗುವನ್ನು ಗಿಲ್ಲುವುದು ಅವರೇ’ ಎಂಬಂತಿತ್ತು ಎಂದು ದೂರಿದರು. ಮಸೂದೆಗೆ ಕಾಂಗ್ರೆಸ್, ಅವರ ಮಿತ್ರ ಪಕ್ಷಗಳಿಂದ ಆದ ಸೋಲು ದೇಶದಲ್ಲಿರುವ ಶೇ 50 ಮಹಿಳೆಯರಿಗೆ ಮಾಡಿದ ದ್ರೋಹ, ಅನ್ಯಾಯ, ಶೋಷಣೆ ಎಂದು ತಿಳಿಸಿದರು.
ಮಹಿಳಾ ಮೀಸಲಾತಿಯ ಬಿಲ್ ಸೋಲು ಕಾಂಗ್ರೆಸ್ಸಿನ ಗೆಲುವು ಎಂದು ಸಂಭ್ರಮಿಸುತ್ತಿದ್ದಾರೆ. ಬಿಜೆಪಿ, ಎನ್‍ಡಿಎಗೆ ಮುಖಭಂಗ ಎನ್ನುತ್ತಿದ್ದಾರೆ. ಇದು ಬಿಜೆಪಿಯ ಮುಖಭಂಗವೂ ಅಲ್ಲ; ಬಿಜೆಪಿಯ ಸೋಲೂ ಅಲ್ಲ. ಕಾಂಗ್ರೆಸ್ ವ್ಯವಸ್ಥಿತವಾಗಿ ಮಾಡಿಕೊಂಡು ಬಂದ ಮಹಿಳಾ ಮುಖಭಂಗವನ್ನು ಇವತ್ತೂ ಮಾಡಿದ್ದೀರಿ ಎಂದು ಟೀಕಿಸಿದರು.
ಮಹಿಳಾ ಮೀಸಲಾತಿಗೆ ಸೋಲಾಗಬೇಕೆಂಬ ನಿಮ್ಮ ಮನಸ್ಥಿತಿ ಇತ್ತು. ಆ ಸೋಲನ್ನು ಮಹಿಳೆಯರಿಗೆ ಉಣಿಸಿದ್ದೀರಿ ಎಂದು ಆಕ್ಷೇಪಿಸಿದರು. ನೀವು ಮಹಿಳಾ ಸಬಲೀಕರಣಕ್ಕಾಗಿ ಗ್ಯಾರಂಟಿ ತಂದಿದ್ದಲ್ಲವೇ? ಮತ್ತೊಂದು ಕಡೆಯಿಂದ ಶೋಷಣೆ ಆಗುತ್ತಿದೆ. ಅವರಿಗೆ ನಿಮ್ಮ 2 ಸಾವಿರ ರೂ. ಬೇಕಾಗಿರುವುದಲ್ಲ. ಈ ದೇಶದ ಸಂಸತ್ತಿನಲ್ಲಿ ಕುಳಿತು ಕಾನೂನು ರಚನೆ, ನ್ಯಾಯನೀತಿ ನಿರೂಪಣೆಯಲ್ಲಿ ಗಂಡಸರಂತೆ ಸರ್ವರಿಗೂ ಸಮಾನ ಹಕ್ಕು ಬೇಕೆಂದು ಅವರ ಅಪೇಕ್ಷೆ.
ನಿಮ್ಮ ಪುಡಿಗಾಸು, ಬಸ್ಸಿನಲ್ಲಿ ಹೋಗಲು ಅವಕಾಶ- ಇವು ಸಬಲೀಕರಣ ಅಲ್ಲ ಎಂದು ತಿಳಿಸಿದರು.
ರಾಜ್ಯದ ಮಹಿಳೆಯರೇ.. ನಿಮಗೆ ಈ ಗ್ಯಾರಂಟಿಯೇ ಸಾಕೇ? ಸಮಾನ ಹಕ್ಕುಗಳ ಗ್ಯಾರಂಟಿ ಬೇಕೇ ಎಂದು ತೀರ್ಮಾನ ಮಾಡಿ. ಕಾಂಗ್ರೆಸ್ ಯಾವತ್ತೂ ಮಹಿಳಾಪರ ಅಲ್ಲ ಎಂದರು. ಡಾ. ಬಾಬಾ ಸಾಹೇಬರ ಪರಿಶ್ರಮದಿಂದ ಮಹಿಳೆಯರಿಗೆ ಮತದಾನದ ಹಕ್ಕು ಕೊಡಲಾಗಿತ್ತು ಎಂದು ನೆನಪಿಸಿದರು.



