ಬೆಂಗಳೂರು: ತೊಗರಿ ಖರೀದಿ ಅವಧಿಯನ್ನು ಒಂದು ತಿಂಗಳ ಕಾಲ ವಿಸ್ತರಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಇಂದು ನಡೆದ ವಿಡಿಯೋ ಕಾನ್ಫರೆನ್ಸ್ನಲ್ಲಿ ಸಚಿವರು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರೊಂದಿಗೆ ಚರ್ಚೆ ನಡೆಸಿದರು. ಮಾರುಕಟ್ಟೆಯಲ್ಲಿ ತೊಗರಿ ಬೆಲೆ ಕನಿಷ್ಠ ಬೆಂಬಲ ಬೆಲೆ (MSP) ಸಮೀಪದಲ್ಲಿರುವುದರಿಂದ ರೈತರ ಹಿತದೃಷ್ಟಿಯಿಂದ ಖರೀದಿ ಅವಧಿ ವಿಸ್ತರಣೆ ಅಗತ್ಯ ಎಂದು ರಾಜ್ಯ ಸರ್ಕಾರ ಮನವಿ ಮಾಡಿತ್ತು.
ಮಾರ್ಚ್ 31, 2026ರಂದು ಮುಕ್ತಾಯಗೊಂಡಿದ್ದ ಖರೀದಿ ಅವಧಿಯನ್ನು ಇನ್ನೂ ಒಂದು ತಿಂಗಳ ಕಾಲ ವಿಸ್ತರಿಸಲು ಕೇಂದ್ರ ಸರ್ಕಾರ ಸಮ್ಮತಿ ನೀಡಿದೆ. ಈ ನಿರ್ಧಾರದಿಂದ ರಾಜ್ಯದ ಸಾವಿರಾರು ರೈತರಿಗೆ ಅನುಕೂಲವಾಗುವುದರ ಜೊತೆಗೆ ತೊಗರಿ ಬೆಲೆ ಸ್ಥಿರತೆ ಕಾಪಾಡಲು ಸಹಕಾರಿ ಆಗಲಿದೆ ಎಂದು ಸಚಿವರು ಹೇಳಿದರು.
2025-26ನೇ ಸಾಲಿನ MSP ಯೋಜನೆಯಡಿ ತೊಗರಿ ಖರೀದಿ ಕುರಿತು ಚರ್ಚೆಯ ವೇಳೆ, ರಾಜ್ಯದಲ್ಲಿ ಹೆಚ್ಚಿನ ಉತ್ಪಾದನೆ ಇರುವುದರಿಂದ ಹೆಚ್ಚಿನ ರೈತರಿಗೆ ಅವಕಾಶ ಕಲ್ಪಿಸುವ ಅಗತ್ಯವಿದೆ ಎಂದು ತಿಳಿಸಲಾಯಿತು. ಈಗಾಗಲೇ 98,610 ರೈತರು ನೋಂದಾಯಿಸಿಕೊಂಡಿದ್ದರೂ, ಕೇವಲ 12,834 ರೈತರು ಮಾತ್ರ ಯೋಜನೆಯ ಪ್ರಯೋಜನ ಪಡೆದಿದ್ದಾರೆ ಎಂಬುದನ್ನು ಸಚಿವರು ಗಮನಕ್ಕೆ ತಂದರು.
ಇದೇ ವೇಳೆ ಕಡಲೆ ಖರೀದಿ ಕುರಿತಾಗಿಯೂ ಚರ್ಚೆ ನಡೆದಿದ್ದು, ಈಗಾಗಲೇ 7.43 ಲಕ್ಷ ಕ್ವಿಂಟಾಲ್ ಕಡಲೆ ಖರೀದಿಸಲಾಗಿದೆ. ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆ ಇನ್ನೂ 58 ಸಾವಿರ ಕ್ವಿಂಟಾಲ್ ಖರೀದಿಗೆ ಅನುಮತಿ ನೀಡುವ ಜೊತೆಗೆ ಖರೀದಿ ಅವಧಿಯನ್ನು ಒಂದು ತಿಂಗಳ ಕಾಲ ವಿಸ್ತರಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಇದರಿಂದ ಕಡಲೆ ಖರೀದಿ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಸಚಿವರು ತಿಳಿಸಿದ್ದಾರೆ.



