ರೋಮ್: ಇಟಲಿಯ ಬರ್ಗಾಮೊ ಪ್ರಾಂತ್ಯದ ಕೊವೊ ಪಟ್ಟಣದಲ್ಲಿ ಇಬ್ಬರು ಭಾರತೀಯರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಭೀಕರ ಘಟನೆ ನಡೆದಿದೆ.
ಮೃತರನ್ನು ರಾಗಿಂದರ್ ಸಿಂಗ್ (48) ಹಾಗೂ ಗುರ್ಮಿತ್ ಸಿಂಗ್ (48) ಎಂದು ಗುರುತಿಸಲಾಗಿದೆ.
ವೈಶಾಖಿ ಹಬ್ಬದ ಸಂದರ್ಭದಲ್ಲಿರುವಾಗ, ಪೂಜಾ ಸ್ಥಳವಾಗಿ ಬಳಸಲಾಗುತ್ತಿದ್ದ ಗೋದಾಮಿನಿಂದ ಹೊರಬರುತ್ತಿದ್ದ ವೇಳೆ ಇಬ್ಬರ ಮೇಲೆ ಗುಂಡು ಹಾರಿಸಲಾಗಿದೆ ಎಂದು ತಿಳಿದುಬಂದಿದೆ. ಈ ಘಟನೆ ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿರುವ ಗುರುದ್ವಾರ ಮಾತಾ ಸಾಹಿಬ್ ಕೌರ್ ಜಿ ಮುಂಭಾಗದ ಚೌಕದಲ್ಲಿ ನಡೆದಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಗುಂಡು ಹಾರಿಸಿದ ವ್ಯಕ್ತಿ ಕೂಡ ಭಾರತೀಯನಾಗಿದ್ದು, ಘಟನೆ ಬಳಿಕ ಆತ ಸ್ಥಳದಿಂದ ಪರಾರಿಯಾಗಿದ್ದಾನೆ. ಆರೋಪಿತನು ಗುರುದ್ವಾರಕ್ಕೆ ಆಗಾಗ್ಗೆ ಭೇಟಿ ನೀಡುತ್ತಿದ್ದ ಎನ್ನಲಾಗಿದ್ದು, ವೈಯಕ್ತಿಕ ದ್ವೇಷವೇ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಘಟನೆ ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ. ಇಟಲಿ ಪೊಲೀಸರು ಪ್ರಕರಣದ ಎಲ್ಲ ಆಯಾಮಗಳ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.



