ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಸಾವಿರಾರು ಹೋಂಸ್ಟೇಗಳು ಪ್ರವಾಸೋದ್ಯಮ ಕ್ಷೇತ್ರಕ್ಕೆ ಗಂಭೀರ ಸವಾಲಾಗಿ ಪರಿಣಮಿಸಿವೆ. ವಿದೇಶಿ ಮಹಿಳೆಯ ಮೇಲಿನ ದೌರ್ಜನ್ಯ ಪ್ರಕರಣದ ಬಳಿಕ ಸುರಕ್ಷತೆ ವಿಚಾರ ಮತ್ತೊಮ್ಮೆ ಚರ್ಚೆಗೆ ಬಂದಿದೆ.
ಹೋಂಸ್ಟೇ ಮಾಲೀಕರ ಸಂಘ ಸರ್ಕಾರವನ್ನು ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದು, ಆಡಳಿತದ ನಿರ್ಲಕ್ಷ್ಯವೇ ಇಂತಹ ಅಕ್ರಮ ಚಟುವಟಿಕೆಗಳಿಗೆ ಕಾರಣ ಎಂದು ದೂರಿದೆ. ಪ್ರವಾಸೋದ್ಯಮ ಇಲಾಖೆಯಲ್ಲಿ ಮುಖ್ಯ ಹುದ್ದೆಗಳು ಖಾಲಿ ಇರುವುದರಿಂದ ನಿಯಂತ್ರಣ ವ್ಯವಸ್ಥೆ ಕುಸಿದಿದೆ ಎಂದು ಸಂಘದ ಅಧ್ಯಕ್ಷೆ ಮೊಂತಿ ಗಣೇಶ್ ಹೇಳಿದ್ದಾರೆ.
ಜಿಲ್ಲೆಯಲ್ಲಿ ಸಾವಿರಾರು ನೋಂದಾಯಿತ ಹೋಂಸ್ಟೇಗಳ ಜೊತೆಗೆ 2,000ಕ್ಕೂ ಹೆಚ್ಚು ಅಕ್ರಮ ತಾಣಗಳು ಕಾರ್ಯನಿರ್ವಹಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಬ್ರೋಕರ್‌ಗಳ ಮೂಲಕ ಪ್ರವಾಸಿಗರನ್ನು ತಪ್ಪು ಸ್ಥಳಗಳಿಗೆ ಕರೆದೊಯ್ಯುವ ದಂಧೆ ಕೂಡ ಹೆಚ್ಚಾಗಿದೆ.
ಈ ಹಿನ್ನೆಲೆಯಲ್ಲಿ ಕೊಡಗು ಎಸ್‌ಪಿ ಕೆ. ಬಿಂದು ಮಣಿ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಪ್ರವಾಸಿಗರ ಸುರಕ್ಷತೆ ಲೋಪವಾದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.



