ಬೆಂಗಳೂರು: ನಗರದ ಮಡಿವಾಳದಲ್ಲಿರುವ ಕೃಪಾನಿಧಿ ಕಾಲೇಜುದಲ್ಲಿ CET ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಇದೀಗ ಕಾಲೇಜಿಗೆ ದೊಡ್ಡ ಹೊಡೆತ ಬಿದ್ದಿದೆ.
ಘಟನೆಗೆ ಸಂಬಂಧಿಸಿದಂತೆ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದ್ದು, ಇದೀಗ ಕಾಲೇಜಿನಲ್ಲಿ ಇನ್ಮುಂದೆ ಯಾವುದೇ ಸರ್ಕಾರಿ ಪರೀಕ್ಷೆಗಳನ್ನು ನಡೆಸದಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಬೆಂಗಳೂರು ನಗರ ಡಿಸಿ ಜಗದೀಶ್ ತಿಳಿಸಿದ್ದಾರೆ.
“ಜನಿವಾರ ತೆಗೆಸಿದ ಪ್ರಕರಣದಲ್ಲಿ ಕರ್ತವ್ಯ ಲೋಪ ಸ್ಪಷ್ಟವಾಗಿದೆ. ತರಬೇತಿ ನೀಡಿದ್ದರೂ ಇಂತಹ ಘಟನೆ ನಡೆದಿರುವುದು ಗಂಭೀರ ವಿಷಯ. ಉದ್ದೇಶಪೂರ್ವಕ ಕೃತ್ಯ ಎನ್ನುವ ಶಂಕೆ ಇದೆ. ಹೀಗಾಗಿ ಈ ಕಾಲೇಜಿಗೆ ಪರೀಕ್ಷಾ ಕೇಂದ್ರ ಮಾನ್ಯತೆ ನೀಡಬಾರದು” ಎಂದು ಡಿಸಿ ಸ್ಪಷ್ಟಪಡಿಸಿದ್ದಾರೆ.
ಈ ನಡುವೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಆಕ್ರೋಶ ವ್ಯಕ್ತಪಡಿಸಿ, ಕಾಲೇಜಿನ ಪರವಾನಗಿ ರದ್ದುಪಡಿಸಿ 25 ಲಕ್ಷ ರೂ. ದಂಡ ವಿಧಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ.



