ಬೆಂಗಳೂರು: ನಗರದ ಕೆಂಗೇರಿ ಹೋಬಳಿಯ ಚಲ್ಲಘಟ್ಟ ಗ್ರಾಮದ ಸರ್ವೇ ನಂಬರ್ 13ರಲ್ಲಿ ವಿಕಲಚೇತನರು ನಿರ್ಮಿಸಿರುವ ಮನೆ ಹಾಗೂ ಶೆಡ್‌ಗಳನ್ನು ತೆರವುಗೊಳಿಸುವ ಕ್ರಮಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.
ಬಿಡಿಎ ಸಹಾಯಕ ಕಾರ್ಯಕಾರಿ ಎಂಜಿನಿಯರ್ ನೀಡಿದ್ದ ತೆರವು ನೋಟಿಸ್ ರದ್ದುಪಡಿಸುವಂತೆ ಮಾರುತಿ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಅದರ ಅಧ್ಯಕ್ಷ ಎಂ.ಜೆ. ರಂಗಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಸುನೀಲ್ ದತ್ ಅವರ ಪೀಠ ಈ ಮಧ್ಯಂತರ ಆದೇಶ ನೀಡಿದೆ. ಜೊತೆಗೆ ರಾಜ್ಯ ಸರ್ಕಾರ ಹಾಗೂ ಬಿಡಿಎ ಸೇರಿ ಎಲ್ಲಾ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಲಾಗಿದೆ.
ನ್ಯಾಯಪೀಠವು, ಸಂಬಂಧಿತ ಮನವಿ ಕುರಿತು ಸೂಕ್ತ ಆದೇಶ ಹೊರಬರುವವರೆಗೆ ಅರ್ಜಿದಾರರನ್ನು ಜಾಗದಿಂದ ತೆರವುಗೊಳಿಸಬಾರದು ಎಂದು ಸ್ಪಷ್ಟಪಡಿಸಿದೆ. ಬಿಡಿಎ ನೀಡಿದ ನೋಟಿಸ್ ಹಿಂಪಡೆಯುವಂತೆ ಅರ್ಜಿದಾರರು ಈಗಾಗಲೇ 2026ರ ಏಪ್ರಿಲ್ 15ರಂದು ಮನವಿ ಸಲ್ಲಿಸಿರುವುದನ್ನೂ ನ್ಯಾಯಪೀಠ ಗಮನಕ್ಕೆ ತೆಗೆದುಕೊಂಡಿದೆ.
ಪ್ರಕರಣದ ಹಿನ್ನೆಲೆ:
ವಿಕಲಚೇತನರಿಗೆ ನಿವೇಶನ ಒದಗಿಸುವ ಉದ್ದೇಶದಿಂದ 2007ರಲ್ಲಿ ಅರ್ಜಿದಾರ ಸಂಘವು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತ್ತು. ಬಳಿಕ ಆಶ್ರಯ ಯೋಜನೆಯಡಿ 2020ರ ಜನವರಿ 6ರಂದು ಐದು ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿತ್ತು. ಆ ಜಾಗವನ್ನು ಸಂಘದ ಸುಪರ್ದಿಗೆ ನೀಡಲಾಗಿದ್ದು, ಕಂದಾಯ ದಾಖಲೆಗಳನ್ನೂ ಸಂಘದ ಹೆಸರಿಗೆ ಮಾಡಲಾಗಿದೆ.
ನಂತರ ಆ ಜಾಗದಲ್ಲಿ 20×30 ಅಡಿ ವಿಸ್ತೀರ್ಣದ 230 ವಸತಿ ನಿವೇಶನಗಳನ್ನು ನಿರ್ಮಿಸಲಾಗಿದ್ದು, ತಹಶೀಲ್ದಾರ್ ಅನುಮೋದನೆ ಸಹ ಪಡೆದಿದೆ. ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ 230 ಫಲಾನುಭವಿಗಳನ್ನು ಆಯ್ಕೆ ಮಾಡಿ ಹಕ್ಕುಪತ್ರಗಳನ್ನು ವಿತರಿಸಿದೆ. ಫಲಾನುಭವಿಗಳು ಆಸ್ತಿಗಳ ಮೇಲೆ ತೆರಿಗೆ ಪಾವತಿಸುತ್ತಾ ವಾಸಿಸುತ್ತಿದ್ದಾರೆ.
ಇದೀಗ ಈ ಜಾಗ ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಸೇರಿದೆ ಎಂದು ಹೇಳಿ ಬಿಡಿಎ ಅಧಿಕಾರಿಗಳು ಮನೆ-ಶೆಡ್ ತೆರವುಗೊಳಿಸುವಂತೆ ನೋಟಿಸ್ ನೀಡಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.



