ಕಾರವಾರ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಸಮೀಪದ ಕಾಳಿ ನದಿಯಲ್ಲಿ ಮೊಸಳೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.
ದಾಂಡೇಲಿಯ ಕುಳಗಿ ರಸ್ತೆಯ ನಿವಾಸಿ ಆನಂದ ಲಲ್ಲೂಜಿ ಮಣ್ಣವಡ್ಡರ (42) ದಾಳಿಗೆ ಒಳಗಾದವರು. ಸಾರ್ವಜನಿಕ ಶೌಚಾಲಯ ಹದಗೆಟ್ಟಿರುವ ಹಿನ್ನೆಲೆ ನಿತ್ಯಕರ್ಮಕ್ಕಾಗಿ ಅವರು ಕಾಳಿ ನದಿಗೆ ಇಳಿದಿದ್ದ ವೇಳೆ ಮೊಸಳೆ ಏಕಾಏಕಿ ದಾಳಿ ನಡೆಸಿದೆ.
ದಾಳಿಯಿಂದ ಗಾಯಗೊಂಡ ಆನಂದ ಕಿರುಚಾಡಿದ ಧ್ವನಿ ಕೇಳಿ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ಮೊಸಳೆಯನ್ನು ಓಡಿಸಿ ಅವರನ್ನು ರಕ್ಷಿಸಿದ್ದಾರೆ. ದಾಳಿಯಲ್ಲಿ ಅವರ ಕಾಲು ಸೇರಿದಂತೆ ದೇಹದ ಹಲವು ಭಾಗಗಳಿಗೆ ಗಾಯಗಳಾಗಿವೆ.
ಗಾಯಾಳುವಿಗೆ ದಾಂಡೇಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಧಾರವಾಡಕ್ಕೆ ರವಾನಿಸಲಾಗಿದೆ.
ಘಟನಾ ಸ್ಥಳಕ್ಕೆ ಸಿಪಿಐ ಶಿವಾನಂದ ಅಂಬಿಗೇರ, ಪಿಎಸ್‌ಐ ಅಮೀನ್ ಅತ್ತಾರ ಹಾಗೂ ಪೊಲೀಸ್ ಸಿಬ್ಬಂದಿ, ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.



