ಬೆಂಗಳೂರು: ವಿದೇಶದಿಂದ ಹೈಡ್ರೋ ಗಾಂಜಾ ತರಿಸಿ ಸ್ಥಳೀಯರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಕೇರಳ ಮೂಲದ ಇಬ್ಬರು ಡ್ರಗ್ ಪೆಡ್ಲರ್‌ಗಳನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸೌಗೇಶ್ ಮತ್ತು ಅಲ್ತಾಫ್ ಎಂದು ಗುರುತಿಸಲಾಗಿದೆ. ಇಬ್ಬರೂ ಕೇರಳದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ. ಆದರೆ ಬಳಿಕ ವಿದೇಶದಿಂದ ಹೈಡ್ರೋ ಗಾಂಜಾ ತರಿಸಿ ಕರ್ನಾಟಕದಲ್ಲಿ ಮಾರಾಟ ಮಾಡುವ ಜಾಲದಲ್ಲಿ ತೊಡಗಿಕೊಂಡಿದ್ದರು.
ಪೊಲೀಸರು ಬಂಧಿತರಿಂದ ಸುಮಾರು 5 ಕೋಟಿ 75 ಲಕ್ಷ ರೂ. ಮೌಲ್ಯದ 5 ಕೆಜಿ 700 ಗ್ರಾಂ ಹೈಡ್ರೋ ಗಾಂಜಾ ವಶಪಡಿಸಿಕೊಂಡಿದ್ದಾರೆ. ಈ ಪ್ರಮಾಣದ ಮಾದಕ ವಸ್ತು ಪತ್ತೆಯಾಗಿರುವುದು ನಗರದಲ್ಲಿ ಚರ್ಚೆಗೆ ಕಾರಣವಾಗಿದೆ.
ತನಿಖೆಯಲ್ಲಿ ಆರೋಪಿಗಳ ವಿರುದ್ಧ ಕೇರಳದಲ್ಲಿ ಈಗಾಗಲೇ ಎನ್‌ಡಿಪಿಎಸ್ ಪ್ರಕರಣಗಳು ದಾಖಲಾಗಿರುವುದು ಪತ್ತೆಯಾಗಿದೆ. ಅಂತರರಾಜ್ಯ ಮಾದಕ ಜಾಲದ ಸಂಪರ್ಕಗಳ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಈ ಪ್ರಕರಣದ ಕುರಿತು ನಂದಿನಿ ಲೇಔಟ್ ಪೊಲೀಸರು ಮುಂದುವರಿದ ತನಿಖೆ ಕೈಗೊಂಡಿದ್ದು, ಮತ್ತಷ್ಟು ಮಾಹಿತಿ ಹೊರಬರುವ ಸಾಧ್ಯತೆ ಇದೆ.



