ಬೆಂಗಳೂರು: ದೇಶದ ಅತ್ಯಂತ ಸಂವೇದನಾಶೀಲ ಭದ್ರತಾ ವಲಯಗಳಲ್ಲಿ ಒಂದಾದ ಇಸ್ರೋ ಐಸೈಟ್ ಕ್ಯಾಂಪಸ್ ಬಳಿ ನಿಷೇಧಿತ ‘ನೋ ಡ್ರೋನ್ ಝೋನ್’ನಲ್ಲಿ ಅಪರಿಚಿತ ಡ್ರೋನ್ ಹಾರಾಟ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.
ಮೇ 2ರಂದು ಬೆಳಿಗ್ಗೆ ಸುಮಾರು 8:16ರ ಸುಮಾರಿಗೆ ಕ್ಯಾಂಪಸ್ ಮೇಲ್ಭಾಗದಲ್ಲಿ 80 ರಿಂದ 100 ಅಡಿ ಎತ್ತರದಲ್ಲಿ ಡ್ರೋನ್ ಹಾರಾಟ ಕಂಡುಬಂದಿದ್ದು, ಸುಮಾರು 10 ರಿಂದ 12 ಸೆಕೆಂಡುಗಳ ಕಾಲ ಹಾರಾಟ ನಡೆಸಿದ ನಂತರ ಡ್ರೋನ್ ಕಣ್ಮರೆಯಾಗಿದೆ ಎಂದು ಸಿಐಎಸ್‌ಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಸಿಐಎಸ್‌ಎಫ್‌ನ ಸಬ್ ಇನ್ಸ್‌ಪೆಕ್ಟರ್ ಅವರು ಎಚ್‌ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ನಿಷೇಧಿತ ಪ್ರದೇಶದಲ್ಲಿ ಅನುಮತಿ ಇಲ್ಲದೆ ಡ್ರೋನ್ ಹಾರಾಟ ನಡೆಸಿರುವುದು ಭದ್ರತೆಗೆ ಗಂಭೀರ ಆತಂಕ ಉಂಟುಮಾಡಿದೆ ಎಂದು ತಿಳಿಸಿದ್ದಾರೆ.
ಇಸ್ರೋ ಐಸೈಟ್ ಕ್ಯಾಂಪಸ್ ಅತ್ಯಂತ ಸಂವೇದನಾಶೀಲ ಪ್ರದೇಶವಾಗಿದ್ದು, ಯಾವುದೇ ವೈಮಾನಿಕ ಚಟುವಟಿಕೆಗಳಿಗೆ ಸಂಪೂರ್ಣ ನಿರ್ಬಂಧವಿದೆ. ಇಂತಹ ಸ್ಥಳದಲ್ಲಿ ಡ್ರೋನ್ ಹಾರಾಟ ನಡೆದಿರುವುದು ಭದ್ರತಾ ವ್ಯವಸ್ಥೆಗೆ ಸವಾಲು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸದ್ಯ ಎಚ್‌ಎಎಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಡ್ರೋನ್ ಹಾರಿಸಿದವರ ಗುರುತು ಪತ್ತೆ ಹಚ್ಚಲು ತನಿಖೆ ಆರಂಭಿಸಿದ್ದಾರೆ.



