ಬೆಂಗಳೂರು: ತಮಿಳುನಾಡಿನಲ್ಲಿ ನಟ ವಿಜಯ್ ಅವರ ಜನಪ್ರಿಯತೆ ಇಷ್ಟು ವೇಗವಾಗಿ ಮತವಾಗಿ ಪರಿವರ್ತನೆ ಆಗಿರುವುದು ಅಚ್ಚರಿಯ ಸಂಗತಿಯಾಗಿದೆ ಎಂದು ಗೃಹಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಿಜಯ್ ಅವರ ಜನಪ್ರಿಯತೆ ಇಷ್ಟು ಪರಿಣಾಮಕಾರಿಯಾಗಿ ಮತಗಳಲ್ಲಿ ಪ್ರತಿಫಲಿಸುತ್ತದೆ ಎಂದು ಯಾವುದೇ ವಿಶ್ಲೇಷಣೆಯಲ್ಲಿಯೂ ಊಹಿಸಲಾಗಿರಲಿಲ್ಲ ಎಂದು ತಿಳಿಸಿದ್ದಾರೆ.
ಜನರು ಸ್ಪಷ್ಟ ತೀರ್ಮಾನ ಕೈಗೊಂಡಿದ್ದು, ಯುವ ಸಮುದಾಯವು ಈ ಬದಲಾವಣೆಗೆ ಮಹತ್ತರ ಸಹಕಾರ ನೀಡಿದೆ. ಇದೊಂದು ಹೊಸ ರಾಜಕೀಯ ಪರಿವರ್ತನೆಯ ಸೂಚನೆ ಎಂದು ಅಭಿಪ್ರಾಯಪಟ್ಟರು.
ಇಲ್ಲಿಯವರೆಗೆ ತಮಿಳುನಾಡಿನಲ್ಲಿ ದ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಪರ್ಯಾಯವಾಗಿ ಆಡಳಿತ ನಡೆಸುತ್ತಿದ್ದವು. ಆದರೆ, ಜನರು ಮೂರನೇ ಪರ್ಯಾಯದ ಹುಡುಕಾಟದಲ್ಲಿದ್ದರು ಎಂದು ಪರಮೇಶ್ವರ್ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ಮೂರನೇ ಆಯ್ಕೆಯಾಗಿ ಸ್ಥಾಪಿಸಲು ಸಾಧ್ಯವಾಗದಿರುವುದನ್ನು ಅವರು ಉಲ್ಲೇಖಿಸಿ, ಅದು ಸಾಧ್ಯವಾಗಿದ್ದರೆ ಫಲಿತಾಂಶ ಬೇರೆಯಾಗಿರಬಹುದಿತ್ತು ಎಂದು ಹೇಳಿದ್ದಾರೆ. ಆದರೆ, ಆ ಅವಕಾಶವನ್ನು ಬಳಸಿಕೊಳ್ಳಲಾಗಲಿಲ್ಲ ಎಂದರು.



