ಕೊಪ್ಪಳ: ಗಂಗಾವತಿ ತಾಲೂಕಿನಲ್ಲಿರುವ ಪವಿತ್ರ ಅಂಜನಾದ್ರಿ ಬೆಟ್ಟದ ಆಂಜನೇಯ ಸ್ವಾಮಿಗೆ ಉದ್ಯಮಿಯೊಬ್ಬರು 2.5 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ದೇಣಿಗೆ ನೀಡಿರುವ ಘಟನೆ ನಡೆದಿದೆ.
ಎಎಂಆರ್ ಕನ್‌ಸ್ಟ್ರಕ್ಷನ್ ಕಂಪನಿಯ ಮಾಲೀಕ ಹಾಗೂ ಶಾಸಕ ಜನಾರ್ದನ ರೆಡ್ಡಿ ಅವರ ಆಪ್ತ ಮಹೇಶ್ ರೆಡ್ಡಿ ಅವರು ದಂಪತಿ ಸಮೇತ ಅಂಜನಾದ್ರಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸಂಕಲ್ಪ ಪೂಜೆ ಹಾಗೂ ಸುಪ್ರಭಾತ ಸೇವೆಯಲ್ಲಿ ಭಾಗವಹಿಸಿದ ಬಳಿಕ ದೇಣಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಪೂಜೆ ನಂತರ ಸುಮಾರು 2.5 ಕೋಟಿ ರೂ. ಮೌಲ್ಯದ ಚಿನ್ನದ ಪ್ರಭಾವಳಿ, ಚಕ್ರ, ಕಿರೀಟ ಮತ್ತು ಗದೆಯನ್ನು ಆಂಜನೇಯ ಸ್ವಾಮಿಗೆ ದೇಣಿಗೆ ರೂಪದಲ್ಲಿ ಗಂಗಾವತಿ ತಾಲೂಕು ಆಡಳಿತಕ್ಕೆ ಹಸ್ತಾಂತರಿಸಲಾಗಿದೆ. ಈ ಮೂಲಕ ಅಂಜನಾದ್ರಿ ದೇವಸ್ಥಾನಕ್ಕೆ ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತದ ಬಂಗಾರದ ದೇಣಿಗೆ ದೊರೆತಿದೆ.
ಈ ಸಂದರ್ಭದಲ್ಲಿ ಶಾಸಕ ಜನಾರ್ದನ ರೆಡ್ಡಿ ದಂಪತಿ ಹಾಗೂ ಮಹೇಶ್ ರೆಡ್ಡಿ ದಂಪತಿ ಉಪಸ್ಥಿತರಿದ್ದರು. ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಈ ದೇಣಿಗೆ ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



