ವಿಜಯಸಾಕ್ಷಿ ಸುದ್ದಿ, ಗದಗ:
ಇತ್ತೀಚೆಗೆ ನಡೆದ ಗದಗ -ಬೆಟಗೇರಿ ನಗರಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಸದಸ್ಯರು, ಪರಾಜಿತಗೊಂಡ ಅಭ್ಯರ್ಥಿಗಳು ಹಾಗೂ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಓಡಾಡಿ ಕೆಲಸ ಮಾಡಿದ ಮುಖಂಡರು, ಕಾರ್ಯಕರ್ತರಿಗೆ ಪ್ರವಾಸ ಭಾಗ್ಯ ದೊರೆತಿದೆ.
ಹೌದು, ಬಿಜೆಪಿಯ ಗೆದ್ದ 18 ಸದಸ್ಯರು, ಪರಾಜಿತಗೊಂಡ ಅಭ್ಯರ್ಥಿಗಳು, ಮುಖಂಡರು, ಕಾರ್ಯಕರ್ತರು ಸೇರಿದಂತೆ ಸುಮಾರು 70 ಜನರು ಅಸ್ಸಾಂನತ್ತ ಪ್ರಯಾಣ ಬೆಳೆಸಿದ್ದಾರೆ. 15 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ಆಪರೇಷನ್ ಹಸ್ತ ನಡೆಸಬಹುದು ಎಂಬ ಕಾರಣಕ್ಕೆ ತಮ್ಮವರನ್ನು ತಮ್ಮ ಬಳಿಯೇ ಸೇಫ್ ಆಗಿಟ್ಟುಕೊಳ್ಳಲು ಗುರುವಾರ (ಜ.6) ರಾತ್ರಿ ಲಗ್ಝುರಿ ಬಸ್ ಮೂಲಕ ಬೆಂಗಳೂರಿಗೆ ಹೋಗಿದ್ದಾರೆ. ಶುಕ್ರವಾರ ಬೆಳಗ್ಗೆ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಅಸ್ಸಾಂಗೆ ಹಾರಿದ್ದಾರೆ.
ನಗರಸಭೆ ಸದಸ್ಯರಾದ ಚಂದ್ರಶೇಖರ ತಡಸದ, ವಿನಾಯಕ ಮಾನ್ವಿ, ಶ್ವೇತಾ ದಂಡಿನ, ಗೂಳಪ್ಪ ಮುಶಿಗೇರಿ, ಅನಿಲ ಅಬ್ಬಿಗೇರಿ, ಪ್ರಕಾಶ್ ಅಂಗಡಿ, ಮಾಧುಸಾ, ಬಾಕಳೆ ಮುಖಂಡರಾದ ಎಂ.ಎಸ್.ಕರಿಗೌಡ್ರ, ಪ್ರಶಾಂತ ನಾಯ್ಕರ, ಮಹೇಶ ದಾಸರ, ವಿಜಯಲಕ್ಷ್ಮೀ, ಸೇರಿದಂತೆ ಅನೇಕರು ಶುಕ್ರವಾರ ಮಧ್ಯಾಹ್ನ ಅಸ್ಸಾಂಗೆ ತೆರಳಿದ್ದಾರೆ.
ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಶನಿವಾರ
(ಜ.8) ರಂದು ಚುನಾವಣಾ ನೋಟಿಫಿಕೇಷನ್ ಆಗುವ ಸಂಭವವಿದೆ. ಬಹುತೇಕ ಸೋಮವಾರ ಅಥವಾ ಮಂಗಳವಾರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಹೇಳಲಾಗುತ್ತಿದ್ದು, ಈ ಬೆನ್ನಲ್ಲೆ ಬಿಜೆಪಿ ರೆಸಾರ್ಟ್ ರಾಜಕಾರಣದತ್ತ ಮುಖ ಮಾಡಿರುವುದು ಗದಗ-ಬೆಟಗೇರಿ ಅವಳಿ ನಗರ ಜನರ ಕೆಂಗಣ್ಣಿಗೆ ಗುರಿಯಾಗಿದೆ.
ಚುನಾವಣೆಯಲ್ಲಿ ವಿಫ್ ಜಾರಿಗೊಳಿಸಿ ನಗರಸಭೆಯಲ್ಲಿ ತನ್ನ ಅಧಿಕಾರ ಸ್ಥಾಪಿಸಲು ಶತಾಯ-ಗತಾಯ ಪ್ರಯತ್ನ ನಡೆಸಿದ್ದು, ಕಾಂಗ್ರೆಸ್ ಪಕ್ಷದ ಆಶಾಭಾವನೆಗೆ ತಣ್ಣೀರು ಎರಚಿದಂತಾಗಿದೆ.
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮೋಜು ಮಸ್ತಿ ಬೇಕಿತ್ತೆ ಎಂಬ ಮಾತುಗಳು ಅವಳಿ ನಗರದಲ್ಲಿ ಕೇಳಿ ಬರುತ್ತಿವೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ಯುವ ಮುಖಂಡ ಅನಿಲ ಮೆಣಸಿನಕಾಯಿ, ನಾವು ಯಾವುದೇ ಮೋಜು-ಮಸ್ತಿ ಮಾಡಲು ಬಂದಿಲ್ಲ. ಹರಕೆ ತೀರಿಸಲು ದೇವಸ್ಥಾನಕ್ಕೆ ಬಂದಿದ್ದೇವೆ. ಕಾಮಾಕ್ಯದೇವಿಯ ದರ್ಶನ ಪಡೆದು ಭಾನುವಾರ ಗದಗ ನಗರಕ್ಕೆ ಬರ್ತೀವಿ ಎಂದು ಸ್ಪಷ್ಟಪಡಿಸಿದರು.