ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬೆಂಗಳೂರಿಗೆ ಭೇಟಿ ನೀಡಲಿದ್ದು, ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಹಿನ್ನೆಲೆ ನಗರದಲ್ಲಿ ಹಲವು ಕಡೆ ಸಂಚಾರ ಮಾರ್ಪಾಡು ಹಾಗೂ ವಾಹನ ನಿಲುಗಡೆ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ.
ಈ ವರ್ಷ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ತನ್ನ 45ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಇದೇ ಸಂದರ್ಭದಲ್ಲಿ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ 70ನೇ ಜನ್ಮದಿನವೂ ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಆಗಮಿಸಲಿದ್ದಾರೆ.
ವಾಹನ ನಿಲುಗಡೆ ನಿರ್ಬಂಧ
ಭಾನುವಾರ ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಹೆಚ್ಎಎಲ್ ಗೇಟ್ ನಂ.30 ಮುಂಭಾಗದಲ್ಲಿ ವಾಹನ ನಿಲುಗಡೆ ಸಂಪೂರ್ಣ ನಿಷೇಧಿಸಲಾಗಿದೆ.
ಇದೇ ವೇಳೆ ಕೆಳಕಂಡ ಪ್ರದೇಶಗಳಲ್ಲೂ ಪಾರ್ಕಿಂಗ್ ನಿರ್ಬಂಧ ಜಾರಿಯಲ್ಲಿರಲಿದೆ:
- ಹೆಚ್ಎಎಲ್ ವಿಮಾನ ನಿಲ್ದಾಣ ಎಕ್ಸಿಟ್ ರಸ್ತೆ – ಹಳೆ ವಿಮಾನ ನಿಲ್ದಾಣ ರಸ್ತೆಯಿಂದ ಡಿಜಿಸಿಎ ಕಚೇರಿವರೆಗೆ (ಎರಡೂ ಬದಿಯಲ್ಲಿ)
- ಹೆಚ್ಎಎಲ್ ಗೇಟ್ ನಂ.30 ರಸ್ತೆ – ಅಂಬ್ರೆಲಾ ಜಂಕ್ಷನ್‌ನಿಂದ ಗೇಟ್ ನಂ.30ರವರೆಗೆ
- ಹಳೆ ವಿಮಾನ ನಿಲ್ದಾಣ ರಸ್ತೆ – ಎಸ್.ಡಿ ರಸ್ತೆ ಜಂಕ್ಷನ್‌ನಿಂದ ಟ್ರಿನಿಟಿ ಜಂಕ್ಷನ್‌ವರೆಗೆ
ಗಣ್ಯರು ಹಾಗೂ ಹಿರಿಯ ಅಧಿಕಾರಿಗಳಿಗೆ ಎಸ್.ಡಿ ರಸ್ತೆ ಜಂಕ್ಷನ್‌ನಲ್ಲಿರುವ ಹೆಚ್ಎಎಲ್ ಡಿಪಾರ್ಟ್‌ಮೆಂಟ್ ಪಾರ್ಕಿಂಗ್ ಹಾಗೂ ಸುರಂಜನ್ ದಾಸ್ ರಸ್ತೆಯ ಹೆಚ್ಎಎಲ್ ಬಸ್ ಯಾರ್ಡ್‌ನಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿದೆ.
ನೈಸ್ ರಸ್ತೆ ಸಂಚಾರ ಬದಲಾವಣೆ
ಪ್ರಧಾನಿ ಭೇಟಿ ಹಿನ್ನೆಲೆ ನೈಸ್ ರಸ್ತೆಯಲ್ಲೂ ಕೆಲ ಮಾರ್ಗಗಳಲ್ಲಿ ಸಂಚಾರ ನಿಯಂತ್ರಣ ಜಾರಿಗೊಳಿಸಲಾಗಿದೆ.
- ತುಮಕೂರು ರಸ್ತೆಯಿಂದ ಕನಕಪುರ ರಸ್ತೆ ಕಡೆಗೆ ತೆರಳುವ ವಾಹನಗಳು ಸಿಎಂಟಿಐ ಜಂಕ್ಷನ್ ಬಳಿ ತಿರುವು ಪಡೆದು ರಾಜ್ ಕುಮಾರ್ ಪುಣ್ಯಭೂಮಿ ರಸ್ತೆ ಮೂಲಕ ಸಂಚರಿಸಬೇಕು.
- ಮಾಗಡಿ ರಸ್ತೆಯಿಂದ ಕನಕಪುರ ರಸ್ತೆ ಕಡೆಗೆ ತೆರಳುವವರು ಸುಮ್ಮನಹಳ್ಳಿ ಜಂಕ್ಷನ್ ಬಳಿ ಪರ್ಯಾಯ ಮಾರ್ಗ ಬಳಸಬೇಕು.
- ಮೈಸೂರು ರಸ್ತೆಯಿಂದ ಕನಕಪುರ ರಸ್ತೆ ಕಡೆಗೆ ಹೋಗುವ ವಾಹನಗಳು ನಾಯಂಡಹಳ್ಳಿ ಜಂಕ್ಷನ್ ಮೂಲಕ ಔಟರ್ ರಿಂಗ್ ರಸ್ತೆ ಬಳಸುವಂತೆ ಸೂಚಿಸಲಾಗಿದೆ.
ಕನಕಪುರ ಕಡೆಗೆ ಪರ್ಯಾಯ ಮಾರ್ಗಗಳು
ಮಾರ್ಗ-1:
ಕೋಣನಕುಂಟೆ ಕ್ರಾಸ್ → ವಸಂತಪುರ → ಕೆಂಗೇರಿ → ಮೈಸೂರು ರಸ್ತೆ → ಅಗರ → ಬಂಜಾರಪಾಳ್ಯ → ಕಗ್ಗಲಿಪುರ
ಮಾರ್ಗ-2:
ಎ2ಬಿ ಜಂಕ್ಷನ್ → ನಾರಾಯಣನಗರ ಜೋಡಿ ರಸ್ತೆ → ಅಂಜನಾಪುರ 80 ಅಡಿ ರಸ್ತೆ → ಬನ್ನೇರುಘಟ್ಟ ಮುಖ್ಯರಸ್ತೆ → ಕಗ್ಗಲಿಪುರ
ಪ್ರಯಾಣಿಕರು ಸಂಚಾರ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಮುಂಚಿತವಾಗಿ ಪ್ರಯಾಣ ಯೋಜನೆ ಮಾಡಿಕೊಳ್ಳುವಂತೆ ಬೆಂಗಳೂರು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.



