HomeKarnataka Newsರೈತನ ಮಗನ ಮಹಾಸಾಧನೆ..! ಐಎಫ್‌ಎಸ್ ಪರೀಕ್ಷೆಯಲ್ಲಿ ದೇಶಕ್ಕೇ ಪ್ರಥಮ

ರೈತನ ಮಗನ ಮಹಾಸಾಧನೆ..! ಐಎಫ್‌ಎಸ್ ಪರೀಕ್ಷೆಯಲ್ಲಿ ದೇಶಕ್ಕೇ ಪ್ರಥಮ

For Dai;y Updates Join Our whatsapp Group

Spread the love

ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದ ರೈತನ ಮಗ ಬಸವರಾಜ್ ಧರೇಪ್ಪ ಕೆಂಪವಾಡ ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಯುಪಿಎಸ್‌ಸಿ ನಡೆಸಿದ ಐಎಫ್‌ಎಸ್ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಬಸವರಾಜ್ ದೇಶಕ್ಕೇ ಮೊದಲ ರ‍್ಯಾಂಕ್ ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ. ಗ್ರಾಮೀಣ ಹಿನ್ನೆಲೆಯಿಂದ ಬಂದಿರುವ ಬಸವರಾಜ್ ಅವರ ಈ ಸಾಧನೆ ಇದೀಗ ಸಾವಿರಾರು ಯುವಕರಿಗೆ ಸ್ಪೂರ್ತಿಯಾಗಿದೆ.

ಸಾಧನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಸವದಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಗ್ರಾಮಸ್ಥರು ಹಾಗೂ ಸಂಬಂಧಿಕರು ಬಸವರಾಜ್ ಮನೆಗೆ ಆಗಮಿಸಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.

ಬಸವರಾಜ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸವದಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪೂರ್ಣಗೊಳಿಸಿದ್ದರು. ಬಳಿಕ ಅಥಣಿಯಲ್ಲಿ ಮುಂದಿನ ವಿದ್ಯಾಭ್ಯಾಸ ಮಾಡಿ, ಶಿರಸಿಯಲ್ಲಿ ಪದವಿ ಶಿಕ್ಷಣ ಮುಗಿಸಿದ್ದರು. ನಂತರ ಯುಪಿಎಸ್‌ಸಿ ಕನಸನ್ನು ಹೊತ್ತು ಬೆಂಗಳೂರಿಗೆ ತೆರಳಿ ತಯಾರಿ ಆರಂಭಿಸಿದ್ದರು.

ಯಾವುದೇ ಪ್ರತಿಷ್ಠಿತ ಕೋಚಿಂಗ್ ಸೆಂಟರ್‌ಗಳ ನೆರವಿಲ್ಲದೆ ಸ್ವಂತ ಪರಿಶ್ರಮದ ಮೂಲಕ ಎರಡನೇ ಪ್ರಯತ್ನದಲ್ಲೇ ಅಖಿಲ ಭಾರತ ಮಟ್ಟದ ಪ್ರಥಮ ಸ್ಥಾನ ಪಡೆದಿರುವುದು ವಿಶೇಷವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಬಸವರಾಜ್, “ನಾನು ಗ್ರಾಮೀಣ ಭಾಗದವನು. ಮೊರಾರ್ಜಿ ಶಾಲೆಯಲ್ಲಿ ಓದಿದವನು. ಗುರಿ ತಲುಪುವ ಛಲವಿದ್ದರೆ ಬಡತನ ಎಂದಿಗೂ ಅಡ್ಡಿಯಾಗುವುದಿಲ್ಲ. ನನ್ನ ಸಾಧನೆ ಅದಕ್ಕೆ ಸಾಕ್ಷಿ” ಎಂದು ಸಂತಸ ವ್ಯಕ್ತಪಡಿಸಿದರು.

ತಂದೆ ಧರೇಪ್ಪ ಕೆಂಪವಾಡ ಮಾತನಾಡಿ, “ನಾವು ಸಣ್ಣ ರೈತ ಕುಟುಂಬದವರು. ಆರ್ಥಿಕ ಸಂಕಷ್ಟ ಇದ್ದರೂ ಮಕ್ಕಳ ಶಿಕ್ಷಣಕ್ಕೆ ಯಾವುದೇ ಕೊರತೆ ಆಗದಂತೆ ನೋಡಿಕೊಂಡಿದ್ದೇವೆ. ಗುತ್ತಿಗೆ ಜಮೀನು ಪಡೆದು ದುಡಿದು ಮಗನನ್ನು ಓದಿಸಿದ್ದೇವೆ. ಇಂದು ಅವನ ಸಾಧನೆಯಿಂದ ನಮ್ಮ ಜೀವನ ಸಾರ್ಥಕವಾಗಿದೆ” ಎಂದು ಭಾವುಕರಾಗಿ ಹೇಳಿದರು.

ರೈತ ಕುಟುಂಬದ ಯುವಕನೊಬ್ಬ ದೇಶದ ಅಗ್ರಸ್ಥಾನಕ್ಕೇರಿರುವುದು ಬೆಳಗಾವಿ ಜಿಲ್ಲೆಗೆ ಮಾತ್ರವಲ್ಲದೆ ಇಡೀ ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!