ಬೆಂಗಳೂರು: ಜಾಗತಿಕ ಮಾರುಕಟ್ಟೆಯಲ್ಲಿನ ಬದಲಾವಣೆಗಳು ಹಾಗೂ ರಾಜ್ಯದಲ್ಲಿ ಇಂಧನ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ, ನಾಗರಿಕ ಸರಬರಾಜು ಮತ್ತು ಆಹಾರ ಇಲಾಖೆ ಪೆಟ್ರೋಲ್ ಹಾಗೂ ಡೀಸೆಲ್ ವಿತರಣೆಗೆ ಸಂಬಂಧಿಸಿದಂತೆ ಹೊಸ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಗ್ರಾಹಕರ ಹಿತಾಸಕ್ತಿ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದ್ದು, ರಾಜ್ಯದ ಎಲ್ಲಾ ಇಂಧನ ವಿತರಣಾ ಕೇಂದ್ರಗಳಿಗೆ ಕಡ್ಡಾಯ ಸೂಚನೆಗಳನ್ನು ನೀಡಲಾಗಿದೆ. ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದ್ದು, ನಿಯಮ ಉಲ್ಲಂಘಿಸುವ ಪೆಟ್ರೋಲ್ ಬಂಕ್ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.
ಮಾರ್ಗಸೂಚಿಯ ಪ್ರಮುಖ ಅಂಶಗಳು ಹೀಗಿವೆ:
ಪೆಟ್ರೋಲಿಯಂ ನಿಯಮಗಳು–2002ರ ಪ್ರಕಾರ, ಇಂಧನವನ್ನು ವಾಹನಗಳ ಟ್ಯಾಂಕ್ಗಳಿಗೆ ಅಥವಾ ಅಧಿಕೃತ ಅನುಮೋದಿತ ಕಂಟೇನರ್ಗಳಿಗೆ ಮಾತ್ರ ಪೂರೈಸಬೇಕು. ಇದಕ್ಕೂ ಗರಿಷ್ಠ 200 ಲೀಟರ್ ಮಿತಿಯನ್ನು ನಿಗದಿಪಡಿಸಲಾಗಿದೆ.
ಸುರಕ್ಷತೆಯ ದೃಷ್ಟಿಯಿಂದ ಬಾಟಲಿ, ಕ್ಯಾನ್ ಅಥವಾ ಇತರ ಅನಧಿಕೃತ ಪಾತ್ರೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಇಂಧನ ವಿತರಣಾ ಕೇಂದ್ರಗಳು ದೊಡ್ಡ ಪ್ರಮಾಣದಲ್ಲಿ ಇಂಧನ ಪೂರೈಕೆ ಮಾಡುವಂತಿಲ್ಲ. ಬಲ್ಕ್ ಪ್ರಮಾಣದ ಪೂರೈಕೆಯನ್ನು ಕೇವಲ ‘ನೇರ ಮಾರಾಟ ಕಾರ್ಯವಿಧಾನ’ದ ಮೂಲಕವೇ ನಡೆಸಬೇಕು. ನಿಯಮ ಉಲ್ಲಂಘಿಸಿ ಬಲ್ಕ್ ಮಾರಾಟ ನಡೆಸಿದರೆ ಪರವಾನಗಿ ರದ್ದುಪಡಿಸುವಂತಹ ಕಠಿಣ ಕ್ರಮ ಎದುರಿಸಬೇಕಾಗಬಹುದು.
ಕೃಷಿ ಚಟುವಟಿಕೆಗಳು ಹಾಗೂ ಜಲಚರ ಸಾಕಾಣಿಕೆಗೆ ಅಗತ್ಯವಿರುವ ಡೀಸೆಲ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಅಧಿಕಾರಿಗಳು ವಿಶೇಷ ಗಮನ ಹರಿಸಬೇಕು ಎಂದು ಸೂಚಿಸಲಾಗಿದೆ. ರೈತರ ಬೇಡಿಕೆಯನ್ನು ಪರಿಶೀಲಿಸಿ ಸಮರ್ಪಕವಾಗಿ ಇಂಧನ ವಿತರಣೆ ಖಚಿತಪಡಿಸಿಕೊಳ್ಳುವಂತೆ ನಿರ್ದೇಶಿಸಲಾಗಿದೆ.
ಇದೇ ವೇಳೆ, ಬಲ್ಕ್ ಕಾರ್ಯಾಚರಣೆಗಳಲ್ಲಿ ಯಾವುದೇ ಅವ್ಯವಹಾರ ಕಂಡುಬಂದರೆ ಅದನ್ನು ಸುರಕ್ಷತೆ ಹಾಗೂ ಲೈಸೆನ್ಸಿಂಗ್ ನಿಯಮಗಳ ಗಂಭೀರ ಉಲ್ಲಂಘನೆ ಎಂದು ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಸ್ಪಷ್ಟಪಡಿಸಿದೆ.



