ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಐಪಿಎಲ್ ಪಂದ್ಯ ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ.
ಆರ್ಸಿಬಿ ಆಟಗಾರ ಟಿಮ್ ಡೇವಿಡ್ ಪಂದ್ಯದ ಬಳಿಕ ಅಸಭ್ಯ ವರ್ತನೆ ತೋರಿದ ಆರೋಪದಡಿ ದಂಡಕ್ಕೆ ಗುರಿಯಾಗಿದ್ದಾರೆ. ಮೇ 10ರಂದು ನಡೆದ ರೋಚಕ ಪಂದ್ಯದಲ್ಲಿ ಆರ್ಸಿಬಿ ಕೊನೆಯ ಎಸೆತದವರೆಗೂ ನಡೆದ ಹೋರಾಟದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಸಾಧಿಸಿತ್ತು. ಆದರೆ ಪಂದ್ಯದ ನಂತರ ಟಿಮ್ ಡೇವಿಡ್ ಮಾಡಿದ ಸನ್ನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದೀಗ ಐಪಿಎಲ್ ಆಡಳಿತ ಮಂಡಳಿ ಕ್ರಮ ಕೈಗೊಂಡಿದೆ.
ಗೆಲುವಿನ ಸಂಭ್ರಮದ ವೇಳೆ ಟಿಮ್ ಡೇವಿಡ್ ಕ್ಯಾಮೆರಾದಲ್ಲಿ ಮಧ್ಯ ಬೆರಳು ತೋರಿಸುತ್ತಿರುವ ದೃಶ್ಯಗಳು ಸೆರೆಯಾಗಿದ್ದವು. ಈ ನಡೆ ಐಪಿಎಲ್ ನೀತಿ ಸಂಹಿತೆಯ ನಿಯಮ 2.6ರ ಅಡಿಯಲ್ಲಿ ‘ಅಸಭ್ಯ, ಆಕ್ಷೇಪಾರ್ಹ ಅಥವಾ ಅವಮಾನಕರ’ ವರ್ತನೆ ಎಂದು ಪರಿಗಣಿಸಲಾಗಿದೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮ್ಯಾಚ್ ರೆಫರಿ ಅಮಿತ್ ಶರ್ಮಾ, ಟಿಮ್ ಡೇವಿಡ್ ಅವರಿಗೆ ಪಂದ್ಯದ ಸಂಭಾವನೆಯ ಶೇ.30ರಷ್ಟು ದಂಡ ವಿಧಿಸಿದ್ದಾರೆ. ಜೊತೆಗೆ ಎರಡು ಡಿಮೆರಿಟ್ ಪಾಯಿಂಟ್ಗಳನ್ನು ಕೂಡ ನೀಡಲಾಗಿದೆ. ಟಿಮ್ ಡೇವಿಡ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ವಿಧಿಸಲಾದ ಶಿಕ್ಷೆಯನ್ನು ಸ್ವೀಕರಿಸಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ 2 ಡಿಮೆರಿಟ್ ಪಾಯಿಂಟ್ ಪಡೆದಿರುವ ಟಿಮ್ ಡೇವಿಡ್, ಮುಂದಿನ ಪಂದ್ಯಗಳಲ್ಲಿ ಇನ್ನೂ 2 ಪಾಯಿಂಟ್ಗಳನ್ನು ಪಡೆದರೆ ಒಂದು ಪಂದ್ಯ ನಿಷೇಧ ಎದುರಿಸುವ ಸಾಧ್ಯತೆ ಇದೆ.
ಇನ್ನು ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಆರಂಭದಲ್ಲೇ ಆಘಾತ ಅನುಭವಿಸಿತು. ಭುವನೇಶ್ವರ್ ಕುಮಾರ್ ದಾಳಿಗೆ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಬೇಗನೆ ವಿಕೆಟ್ ಒಪ್ಪಿಸಿದರು. ಬಳಿಕ ತಿಲಕ್ ವರ್ಮಾ ಮತ್ತು ನಮನ್ ಧೀರ್ ಹೋರಾಟದ ನೆರವಿನಿಂದ ಮುಂಬೈ 166 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಆರ್ಸಿಬಿಗೆ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾಗಿದ್ದು ಆರಂಭಿಕ ಸಂಕಷ್ಟ ತಂದಿತ್ತು. ಆದರೆ ಕೃನಾಲ್ ಪಾಂಡ್ಯ 46 ಎಸೆತಗಳಲ್ಲಿ 73 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ಕೊನೆಯ ಓವರ್ನಲ್ಲಿ ಭುವನೇಶ್ವರ್ ಕುಮಾರ್ ಸಿಕ್ಸರ್ ಹಾಗೂ ರಸಿಖ್ ಸಲಾಮ್ ಸಮಯೋಚಿತ ಆಟದ ನೆರವಿನಿಂದ ಆರ್ಸಿಬಿ ರೋಚಕ ಜಯ ದಾಖಲಿಸಿತು.



