ವಿಜಯನಗರ: ವಿಜಯನಗರ ಜಿಲ್ಲೆಯ ಕೂಡ್ಲಿಗಿ ಉಪವಿಭಾಗದಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣಗಳಿಗೆ ಕೊನೆಗೂ ಪೊಲೀಸ್ ಇಲಾಖೆ ಬ್ರೇಕ್ ಹಾಕಿದೆ. ಹಗರಿಬೊಮ್ಮನಹಳ್ಳಿ, ತಂಬ್ರಹಳ್ಳಿ ಮತ್ತು ಮರಿಯಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ನಾಲ್ಕು ಪ್ರಮುಖ ಕಳ್ಳತನ ಪ್ರಕರಣಗಳನ್ನು ಪೊಲೀಸರು ಭೇದಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ನೀಡಿದ ಮಾಹಿತಿಯಂತೆ, ವಶಪಡಿಸಿಕೊಂಡಿರುವ ಆಭರಣಗಳ ಒಟ್ಟು ಮೌಲ್ಯ ಸುಮಾರು 14.06 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಹಗರಿಬೊಮ್ಮನಹಳ್ಳಿ ಠಾಣೆಯ ಎರಡು ಕೇಸ್‌ಗಳು, ತಂಬ್ರಹಳ್ಳಿ ಠಾಣೆಯ 23/2026 ಮತ್ತು ಮರಿಯಮ್ಮನಹಳ್ಳಿ ಠಾಣೆಯ 62/2026 ಪ್ರಕರಣಗಳು ಈ ಕಾರ್ಯಾಚರಣೆಯಿಂದ ಭೇದಗೊಂಡಿವೆ. ಪ್ರಕರಣಗಳ ತನಿಖೆ ವೇಳೆ ಆರೋಪಿಗಳ ಚಲನವಲನಗಳ ಮೇಲೆ ನಿಗಾ ಇಟ್ಟು ಪೊಲೀಸರು ಬಲೆ ಬೀಸಿ ಬಂಧಿಸಿದ್ದಾರೆ.
ಕೂಡ್ಲಿಗಿ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ವಿವಿಧ ಪೊಲೀಸ್ ತಂಡಗಳು ಸಂಯುಕ್ತ ಕಾರ್ಯಾಚರಣೆ ನಡೆಸಿದ್ದು, ಪ್ರಕರಣ ಭೇದಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ. ಪೊಲೀಸ್ ಇಲಾಖೆಯ ಈ ವೇಗದ ಕಾರ್ಯಾಚರಣೆ ಜಿಲ್ಲೆಯ ಜನರಲ್ಲಿ ಭದ್ರತೆಯ ಭರವಸೆ ಮೂಡಿಸಿದೆ.



