ವಡೋದರಾ: ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟು ಹಾಗೂ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಇಂಧನ ಉಳಿತಾಯದ ಬಗ್ಗೆ ಮಹತ್ವದ ಸಲಹೆ ನೀಡಿದ್ದಾರೆ.
ವರ್ಕ್ ಫ್ರಂ ಹೋಮ್ ವ್ಯವಸ್ಥೆ, ಸಾರ್ವಜನಿಕ ಸಾರಿಗೆ ಬಳಕೆ ಮತ್ತು ಶಾಲಾ-ಕಾಲೇಜುಗಳಲ್ಲಿ ಆನ್‌ಲೈನ್ ತರಗತಿಗಳನ್ನು ಪರಿಗಣಿಸುವಂತೆ ಪ್ರಧಾನಿ ಮನವಿ ಮಾಡಿದ್ದಾರೆ.
ಗುಜರಾತ್‌ನ ವಡೋದರಾದಲ್ಲಿ ಸರ್ದಾರ್‌ಧಾಮ್ ಭವನ-3 ಹಾಗೂ ವಿದ್ಯಾರ್ಥಿನಿಲಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ದೇಶದ ಇಂಧನ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕೆಂದು ಕರೆ ನೀಡಿದರು.
ಕೋವಿಡ್-19 ಅವಧಿಯಲ್ಲಿ ಅನುಸರಿಸಿದ್ದ ಮಾದರಿಯಂತೆ, ಶಾಲಾ-ಕಾಲೇಜುಗಳು ತಾತ್ಕಾಲಿಕವಾಗಿ ಆನ್‌ಲೈನ್ ತರಗತಿಗಳನ್ನು ನಡೆಸುವ ಕುರಿತು ಆಲೋಚಿಸಬೇಕು ಎಂದು ಸಲಹೆ ನೀಡಿದರು.
ಇದರಿಂದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯ ಪ್ರಯಾಣ ಕಡಿಮೆಯಾಗಿದ್ದು, ಇಂಧನ ಉಳಿತಾಯಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಪೆಟ್ರೋಲ್ ಹಾಗೂ ಡೀಸೆಲ್ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡುವಂತೆ ಮನವಿ ಮಾಡಿದ ಪ್ರಧಾನಿ, ಮೆಟ್ರೋ ರೈಲು, ಎಲೆಕ್ಟ್ರಿಕ್ ಬಸ್‌ಗಳು ಸೇರಿದಂತೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ಹೆಚ್ಚು ಬಳಸುವಂತೆ ದೇಶವಾಸಿಗಳಿಗೆ ಕರೆ ನೀಡಿದರು.
ಅದೇ ರೀತಿ ಕಾರು ಹಂಚಿಕೆ ವ್ಯವಸ್ಥೆಯನ್ನು ಉತ್ತೇಜಿಸುವ ಮೂಲಕ ಇಂಧನ ಬಳಕೆ ಕಡಿಮೆ ಮಾಡಬಹುದು ಎಂದರು.
ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಸಾಧ್ಯವಾದಷ್ಟು ವರ್ಚುವಲ್ ಸಭೆಗಳನ್ನು ನಡೆಸಬೇಕು. ಅಗತ್ಯವಿರುವ ಕಡೆ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಕಲ್ಪಿಸಬೇಕು ಎಂದು ಪ್ರಧಾನಿ ಸಲಹೆ ನೀಡಿದರು.
ಇಂಧನ ಉಳಿತಾಯದ ಜೊತೆಗೆ ದೇಶದ ವಿದೇಶಿ ವಿನಿಮಯ ಮೀಸಲು ಸಂರಕ್ಷಿಸುವ ನಿಟ್ಟಿನಲ್ಲಿ ಖಾದ್ಯ ತೈಲ ಬಳಕೆಯನ್ನು ಮಿತಗೊಳಿಸುವುದು, ಚಿನ್ನದ ಖರೀದಿಯನ್ನು ಮುಂದೂಡುವುದು ಹಾಗೂ ಅನಗತ್ಯ ವಿದೇಶಿ ಪ್ರವಾಸಗಳನ್ನು ತಪ್ಪಿಸುವಂತೆ ಮನವಿ ಮಾಡಿದರು. ಜಾಗತಿಕ ಆರ್ಥಿಕ ಸವಾಲುಗಳ ನಡುವೆ ದೇಶದ ಆರ್ಥಿಕ ಸ್ಥಿರತೆ ಕಾಪಾಡಲು ಪ್ರತಿಯೊಬ್ಬ ನಾಗರಿಕರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾಗಿದೆ ಎಂದು ಪ್ರಧಾನಿ ಮೋದಿ ಕರೆ ನೀಡಿದರು.



