Home Crime News 1 ಕೋಟಿ ಮೌಲ್ಯದ 2 ತಲೆ ಮಣ್ಣು ಮುಕ್ಕ ಹಾವು ಮಾರಾಟಕ್ಕೆ ಯತ್ನ: ಐವರ ಬಂಧನ

1 ಕೋಟಿ ಮೌಲ್ಯದ 2 ತಲೆ ಮಣ್ಣು ಮುಕ್ಕ ಹಾವು ಮಾರಾಟಕ್ಕೆ ಯತ್ನ: ಐವರ ಬಂಧನ

0
1 ಕೋಟಿ ಮೌಲ್ಯದ 2 ತಲೆ ಮಣ್ಣು ಮುಕ್ಕ ಹಾವು ಮಾರಾಟಕ್ಕೆ ಯತ್ನ: ಐವರ ಬಂಧನ
Spread the love

ಚಿಕ್ಕಮಗಳೂರು: ಅಪರೂಪದ ಮತ್ತು ಅಕ್ರಮ ಮಾರುಕಟ್ಟೆಯಲ್ಲಿ ಕೋಟ್ಯಂತರ ರೂ. ಮೌಲ್ಯ ಹೊಂದಿದೆ ಎನ್ನಲಾಗುವ ಎರಡು ತಲೆ ಮಣ್ಣುಮುಕ್ಕ ಹಾವು (ರೆಡ್ ಸ್ಯಾಂಡ್ ಬೋವಾ) ಮಾರಾಟಕ್ಕೆ ಯತ್ನಿಸುತ್ತಿದ್ದ ಅಂತರರಾಜ್ಯ ಜಾಲವನ್ನು ಸಿಐಡಿ ಅರಣ್ಯ ಸಂಚಾರ ದಳದ ಪೊಲೀಸರು ಭೇದಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ವಾಹನಗಳು ಮತ್ತು ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಚಿಕ್ಕಮಗಳೂರು ನಗರದ ವಾಜಪೇಯಿ ಲೇಔಟ್ ಪ್ರದೇಶದಲ್ಲಿ ಹಾವು ಮಾರಾಟದ ಡೀಲ್ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಅಧಿಕಾರಿಗಳು ದಾಳಿ ನಡೆಸಿದರು. ಈ ವೇಳೆ ಆಂಧ್ರಪ್ರದೇಶ ಮೂಲದ ವಂಶಿಕೃಷ್ಣ, ಆರೀಫ್ ಬಾಷಾ ಹಾಗೂ ಕರ್ನಾಟಕದ ಶಿವಮೊಗ್ಗ ಮತ್ತು ತುಮಕೂರು ಮೂಲದ ಯತೀಶ್, ಷಫಿ ಮತ್ತು ಮತ್ತೋರ್ವ ಆರೀಫ್ ಬಾಷಾ ಬಂಧಿತರಾದರು.

ತನಿಖೆ ಪ್ರಕಾರ, ಚಿತ್ರದುರ್ಗ ಜಿಲ್ಲೆಯ ಚನ್ನಗಿರಿಯಲ್ಲಿ ಪತ್ತೆಯಾಗಿದ್ದ ಹಾವನ್ನು ಭಾರೀ ಮೊತ್ತಕ್ಕೆ ಮಾರಾಟ ಮಾಡಲು ಆರೋಪಿಗಳು ಚಿಕ್ಕಮಗಳೂರಿಗೆ ತಂದಿದ್ದರು. ಈ ಜಾಲದ ಪ್ರಮುಖ ಸಂಚಾಲಕ ಯತೀಶ್ ಆಗಿದ್ದು, ಆಂಧ್ರ ಮೂಲದ ಸಂಪರ್ಕಗಳ ಮೂಲಕ ವಿದೇಶಿ ಖರೀದಿದಾರರಿಗೆ ಹಾವು ಸಾಗಾಟ ಮಾಡುವ ಯತ್ನ ನಡೆದಿತ್ತು ಎಂದು ತಿಳಿದುಬಂದಿದೆ.

ಬಂಧಿತರಿಂದ ಒಂದು ಸ್ವಿಫ್ಟ್ ಕಾರು, ಒಂದು ವ್ಯಾಗ್ನರ್ ಕಾರು ಹಾಗೂ ಐದು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ರಮ ಮಾರುಕಟ್ಟೆಯಲ್ಲಿ ಈ ರೀತಿಯ ಹಾವುಗಳಿಗೆ ಮೂಢನಂಬಿಕೆ ಆಧಾರಿತ ಬೇಡಿಕೆ ಹೆಚ್ಚಿದ್ದು, ಮಾಟಮಂತ್ರ, ಅಮೂಲ್ಯ ಲೋಹಗಳ ಪತ್ತೆ ಹಾಗೂ ಕಳ್ಳಸಾಗಣೆಗೆ ಬಳಸಲಾಗುತ್ತದೆ ಎಂಬ ವದಂತಿಗಳಿಂದ ಕಾಳಬಜಾರಿನಲ್ಲಿ ಕೋಟ್ಯಂತರ ವ್ಯವಹಾರ ನಡೆಯುತ್ತಿದೆ ಎನ್ನಲಾಗಿದೆ.

ಚಿಕ್ಕಮಗಳೂರು ಅರಣ್ಯ ಸಂಚಾರ ದಳದ ಉಪನಿರೀಕ್ಷಕ ಬಾಬುದ್ದಿನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here