//ಕೈ ಪಾದಯಾತ್ರೆಗೆ ಸಚಿವರ ವಾಗ್ದಾಳಿ//
–ಜನ ರಾತ್ರಿ ಕಂಡ ಬಾವಿಗೆ ಹಗಲು ಬೀಳುವುದಿಲ್ಲ
–ಈ ಹಿಂದೆ ಕೂಡಲಸಂಗಮಕ್ಕೆ ಪಾದಯಾತ್ರೆ ಮಾಡಿ ನೀಡಿದ್ದ ಭರವಸೆ ಏನಾಯ್ತು?
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕಾಂಗ್ರೆಸ್ಗೆ ಡೊಂಬರಾಟ ಹೊಸದೇನಲ್ಲ. ಕಾಂಗ್ರೆಸ್ನವರು ಚುನಾವಣೆ ಸಮೀಪಿಸುತ್ತಿದ್ದಂತೆ ಪಾದಯಾತ್ರೆಯಂಥ ಡೊಂಬರಾಟ ಶುರು ಮಾಡ್ತಾರೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ನಿಷೇಧಿತ ಪದ ಬಳಸಿ ವಿವಾದ ಎಳೆದುಕೊಂಡಿದ್ದಾರೆ.
ಕೊಪ್ಪಳ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೂರನಢ ಲಸಿಕಾಕರಣ ಕುರಿತು ಸುದ್ದಿಗೋಷ್ಠಿ ನಡೆಸುವ ವೇಳೆ ಸಚಿವರು, ಕಾಂಗ್ರೆಸ್ ನಡೆ ಟೀಕಿಸುವ ಭರದಲ್ಲಿ “ಡೊಂಬರಾಟ” ಎಂಬ ನಿಷೇಧಿತ ಪದವನ್ನು ಬಳಸಿದರು.
ಜನರ ಜೀವದ ಬಗ್ಗೆ ಕಾಳಜಿ ಇಲ್ಲದೇ ಕೋವಿಡ್ ನಿಯಮ ಉಲ್ಲಂಘಿಸಿ ಮೇಕೆದಾಟು ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ನವರು ರಾಜಕಾರಣ ಹಾಗೂ ಕೆಲಸವನ್ನು ಜನರಿಗಾಗಿ ಮಾಡುವುದನ್ನು ಬಿಟ್ಟು ರಾಜಕೀಯಕ್ಕಾಗಿ, ಅಧಿಕಾರದ ಲಾಲಸೆಗಾಗಿ ಮಾಡುತ್ತಿದ್ದಾರೆ ಎಂದು ಹರಿ ಹಾಯ್ದರು.
ಇನ್ನೂ ಚುನಾವಣೆ ಮುಂದೆ ಇದೆ. ಮೇಕೆದಾಟು ಯೋಜನೆ ಜಾರಿ ಬಗ್ಗೆ ಸಿಎಂ ಬೊಮ್ಮಾಯಿಯವರು ಕೆಲಸ ಮಾಡುತ್ತಿದ್ದಾರೆ. ಕಳೆದ ಸಲ ಪಾದಯಾತ್ರೆ ಮಾಡಿದಾಗ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಮುಖಂಡರು ಇನ್ನೂ ಅದೇ ಭ್ರಮೆಯಲ್ಲೇ ಇದ್ದಾರೆ. ಕೂಡಲ ಸಂಗಮಕ್ಕೆ ಪಾದಯಾತ್ರೆ ನಡೆಸಿ ಕೃಷ್ಣಾ ಯೋಜನೆ ಅನುಷ್ಠಾನಕ್ಕೆ ಪ್ರತಿ ವರ್ಷ 10 ಸಾವಿರ ಕೋಟಿ ಅನುದಾನ ಕೊಡುವುದಾಗಿ ನೀಡಿದ್ದ ಭರವಸೆ ಏನಾಯ್ತು ಎಂಬುದು ಜನರಿಗೆ ಗೊತ್ತಿದೆ ಎಂದು ಲೇವಡಿ ಮಾಡಿದರು.
ದೇವರ ಮೇಲೆ ಪ್ರಮಾಣ ಮಾಡಿ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ಗೆ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಡಿಪಿಆರ್ ಮಾಡಿಸಲೂ ಆಗಲಿಲ್ಲ. ಸಮ್ಮಿಶ್ರ ಸರಕಾರ ಇದ್ದಾಗ ಡಿಪಿಆರ್ ಆಗಿದೆ. ಕಾಂಗ್ರೆಸ್ಗೆ ಮೇಕೆದಾಟು ಯೋಜನೆ ಬಗ್ಗೆ ಪ್ರಾಮಾಣಿಕ ಕಳಕಳಿ ಇಲ್ಲ. ರಾಜಕೀಯ ಲಾಭಕ್ಕಾಗಿ ಪಾದಯಾತ್ರೆ ಹೆಸರಿನಲ್ಲಿ ರಾಜಕೀಯ ಮಾಡಲು ನಿಂತಿದೆ ಎಂದು ಸಚಿವ ಆಚಾರ್ ಆರೋಪಿಸಿದರು.
ಜನರು ರಾತ್ರಿ ಕಂಡ ಬಾವಿಗೆ ಹಗಲು ಬೀಳುವುದಿಲ್ಲ. ಕಾಂಗ್ರೆಸ್ನವರ ನಾಟಕವನ್ನು ಜನರು ಒಪ್ಪುವುದಿಲ್ಲ. ಜನರ ದಾರಿ ತಪ್ಪಿಸುವುದು ಕಾಂಗ್ರೆಸ್ಗೆ ಮೊದಲಿನಿಂದಲೂ ಇರುವ ಗುಣ. ಜನರು ಎಲ್ಲವನ್ನು ಗಮನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.