ಹಾಸನ: ನಗರದ ಕುವೆಂಪುನಗರದಲ್ಲಿರುವ ಎಂ.ಜೆ ಫಿಟ್ನೆಸ್ ಸ್ಟುಡಿಯೋದಲ್ಲಿ ನಡೆದ ಕ್ಷುಲ್ಲಕ ಜಗಳ ಭೀಕರ ತಿರುವು ಪಡೆದಿದೆ. ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಭುಜ ತಾಗಿದ ವಿಚಾರಕ್ಕೆ ಯುವಕನೊಬ್ಬನ ಮೇಲೆ ಕ್ರೂರ ಹಲ್ಲೆ ನಡೆಸಲಾಗಿದ್ದು, ಗಾಯಾಳು ಯುವಕ ಕೋಮಾ ಸ್ಥಿತಿಗೆ ಜಾರಿದ್ದಾನೆ.
ಕೀರ್ತನ್ ಮತ್ತು ವರುಣ್ ಎಂಬ ಇಬ್ಬರು ಯುವಕರು ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದರು. ಈ ವೇಳೆ ಕೀರ್ತನ್ ಅವರ ಭುಜ ವರುಣ್‌ಗೆ ತಾಗಿದ್ದರಿಂದ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.
ಆರೋಪದ ಪ್ರಕಾರ, ಕೋಪಗೊಂಡ ವರುಣ್ ಏಕಾಏಕಿ ಕೀರ್ತನ್ ತಲೆ ಭಾಗಕ್ಕೆ ಬಲವಾಗಿ ಕಿಕ್ ಹೊಡೆದಿದ್ದಾನೆ. ಹಲ್ಲೆಯ ತೀವ್ರತೆಗೆ ಕೀರ್ತನ್ ನೆಲಕ್ಕುರುಳಿದ್ದು, ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆ.
ವೈದ್ಯರು ನೀಡಿರುವ ಮಾಹಿತಿ ಪ್ರಕಾರ, ಕೀರ್ತನ್ ಅವರಿಗೆ ತಲೆಬುರುಡೆಗೆ ಗಂಭೀರ ಪೆಟ್ಟಾಗಿದ್ದು, ಸದ್ಯ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸ್ಥಿತಿ ಆತಂಕಕಾರಿ ಎಂದು ತಿಳಿದುಬಂದಿದೆ.
ಈ ಸಂಬಂಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಿಮ್‌ನ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



