ಬೆಂಗಳೂರು: ಇಂಧನ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಸಾರ್ವಜನಿಕರಿಗೆ ಖಾಸಗಿ ಬಸ್ ಮಾಲೀಕರು ಮತ್ತೊಂದು ಶಾಕ್ ನೀಡಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯ ಹಿನ್ನೆಲೆ ಇಂದಿನ ಮಧ್ಯರಾತ್ರಿಯಿಂದಲೇ ಖಾಸಗಿ ಬಸ್ ಟಿಕೆಟ್ ದರ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ.
ಹೊಸ ದರ ಅನ್ವಯ ಟಿಕೆಟ್ ದರದಲ್ಲಿ ಶೇ.20ರಿಂದ 30ರವರೆಗೆ ಏರಿಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ಬೆಲೆ ಏರಿಕೆಯಿಂದ ಸಂಕಷ್ಟ ಅನುಭವಿಸುತ್ತಿರುವ ಜನರಿಗೆ ಇದರಿಂದ ಮತ್ತಷ್ಟು ಆರ್ಥಿಕ ಹೊರೆ ಬೀಳಲಿದೆ.
ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ ಮಾತನಾಡಿ, “ಒಂದು ಬಸ್ಗೆ ಪ್ರತಿದಿನ ಕನಿಷ್ಠ 150 ಲೀಟರ್ ಡೀಸೆಲ್ ಅಗತ್ಯವಿರುತ್ತದೆ. ಇಂಧನ ದರದಲ್ಲಿ ಲೀಟರ್ಗೆ 3 ರೂ. ಹೆಚ್ಚಳವಾಗಿರುವುದರಿಂದ ದಿನಕ್ಕೆ ಸುಮಾರು 450 ರೂ. ಹೆಚ್ಚುವರಿ ವೆಚ್ಚವಾಗುತ್ತಿದೆ. ಹೀಗಾಗಿ ಟಿಕೆಟ್ ದರ ಹೆಚ್ಚಿಸುವುದು ಅನಿವಾರ್ಯವಾಗಿದೆ” ಎಂದು ತಿಳಿಸಿದ್ದಾರೆ.
ಇದೇ ವೇಳೆ ತೈಲ ಕಂಪನಿಗಳು ಶುಕ್ರವಾರ ಬೆಳಿಗ್ಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯನ್ನು ಘೋಷಿಸಿದ್ದವು. ಎರಡೂ ಇಂಧನಗಳ ದರ ಲೀಟರ್ಗೆ 3 ರೂಪಾಯಿಗೂ ಹೆಚ್ಚು ಏರಿಕೆ ಕಂಡಿತ್ತು.
ಬೆಂಗಳೂರುನಲ್ಲಿ ಪೆಟ್ರೋಲ್ ದರ ಲೀಟರ್ಗೆ 3.27 ರೂ. ಹಾಗೂ ಡೀಸೆಲ್ ದರ 3.12 ರೂ. ಏರಿಕೆಯಾಗಿದೆ. ಇದರ ಬೆನ್ನಲ್ಲೇ ದೇಶಾದ್ಯಂತ ಸಿಎನ್ಜಿ ದರವನ್ನೂ ಪ್ರತಿ ಕೆಜಿಗೆ 2 ರೂ. ಹೆಚ್ಚಳ ಮಾಡಲಾಗಿದೆ.
ಹಾರ್ಮುಜ್ ಜಲಸಂಧಿಯಲ್ಲಿ ಉಂಟಾದ ದಿಗ್ಬಂಧನದಿಂದ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದು ದರ ಏರಿಕೆಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಇದರ ಪರಿಣಾಮ ಸಾರಿಗೆ ಕ್ಷೇತ್ರದ ಮೇಲೂ ನೇರವಾಗಿ ಬಿದ್ದಿದ್ದು, ಪ್ರಯಾಣಿಕರಿಗೆ ಹೆಚ್ಚುವರಿ ವೆಚ್ಚದ ಭಾರ ಎದುರಾಗುವ ಸಾಧ್ಯತೆ ಇದೆ.



