ಬೆಂಗಳೂರು: ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಗುಬ್ಬಿ ಸಮೀಪದ ‘ಹೋಮ್ ಆಫ್ ಹೋಪ್’ ನಿರಾಶ್ರಿತರ ಆಶ್ರಮದಿಂದ ನಾಲ್ವರು ವಿದೇಶಿ ಮಹಿಳೆಯರು ಪೊಲೀಸರ ಕಣ್ಗಾವಲಿನ ನಡುವೆಯೇ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಮೇ 11ರಂದು ಮುಂಜಾನೆ ಸುಮಾರು 3 ಗಂಟೆ ವೇಳೆಗೆ ಆಶ್ರಮದ ಎರಡನೇ ಮಹಡಿಯ ಕಿಟಕಿಯ ಗ್ರಿಲ್ ಮುರಿದು ಮಹಿಳೆಯರು ತಪ್ಪಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದವರಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
ಪರಾರಿಯಾದ ಮಹಿಳೆಯರು ಉಗಾಂಡ ಮತ್ತು ನೈಜೀರಿಯಾ ಮೂಲದವರಾಗಿದ್ದು, ವೀಸಾ ಅವಧಿ ಮುಗಿದ ಬಳಿಕವೂ ಭಾರತದಲ್ಲೇ ಅಕ್ರಮವಾಗಿ ನೆಲೆಸಿದ್ದರು ಎನ್ನಲಾಗಿದೆ. ಉಗಾಂಡ ಮೂಲದ ತೋಪಿಷ್ಟ, ನಗವ, ಸಫಿನಾ ಮತ್ತು ಪಿತೀನ ಎಂಬ ಮಹಿಳೆಯರು ಪರಾರಿಯಾದವರ ಪಟ್ಟಿಯಲ್ಲಿ ಸೇರಿದ್ದಾರೆ.
ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಒ) ಅಧಿಕಾರಿಗಳು ಇವರನ್ನು ವಶಕ್ಕೆ ಪಡೆದಿದ್ದರೂ, ತಮ್ಮ ವಶದಲ್ಲಿನ ವಸತಿ ಸೌಲಭ್ಯ ಕೊರತೆಯಿಂದಾಗಿ ತಾತ್ಕಾಲಿಕವಾಗಿ ‘ಹೋಮ್ ಆಫ್ ಹೋಪ್’ ಆಶ್ರಮದಲ್ಲಿ ಇರಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಈ ಮಹಿಳೆಯರು ಈಗಾಗಲೇ ಗಾಂಜಾ ಹಾಗೂ ಮಾದಕ ವಸ್ತುಗಳಿಗೆ ಸಂಬಂಧಿಸಿದ ಹಲವು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರೆಂಬ ಆರೋಪಗಳಿವೆ. ಆಶ್ರಮದಲ್ಲಿ ಇರಿಸಿದ್ದ ಸಮಯದಲ್ಲಿಯೂ ಅವರ ಬಳಿ ಗಾಂಜಾ ಮತ್ತು ಇತರ ಮಾದಕ ವಸ್ತುಗಳು ಪತ್ತೆಯಾಗಿದ್ದವು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈಗ ಅವರು ಪರಾರಿಯಾಗಿರುವ ಹಿನ್ನೆಲೆಯಲ್ಲಿ ಮತ್ತೆ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಬಗ್ಗೆ ಪೊಲೀಸರು ಆತಂಕ ವ್ಯಕ್ತಪಡಿಸಿದ್ದಾರೆ. ನಗರದ ವಿವಿಧ ಪ್ರದೇಶಗಳಲ್ಲಿ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, ಸಂಬಂಧಪಟ್ಟ ಭದ್ರತಾ ಸಿಬ್ಬಂದಿಯ ನಿರ್ಲಕ್ಷ್ಯದ ಕುರಿತೂ ತನಿಖೆ ಮುಂದುವರಿದಿದೆ.



