ಬಳ್ಳಾರಿ: ರಾಜ್ಯ ಸರ್ಕಾರದ ಮೂರು ವರ್ಷದ ಆಡಳಿತವನ್ನು ತೀವ್ರವಾಗಿ ಟೀಕಿಸಿರುವ ಬಿಜೆಪಿ ನಾಯಕ ಬಿ. ಶ್ರೀರಾಮುಲು, “ಮೂರು ವರ್ಷದಲ್ಲಿ ನೂರು ಸುಳ್ಳು ಹೇಳಿರುವುದೇ ಈ ಸರ್ಕಾರದ ದೊಡ್ಡ ಸಾಧನೆ” ಎಂದು ಆರೋಪಿಸಿದ್ದಾರೆ.
ಬಳ್ಳಾರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಆಡಳಿತ ಸುಳ್ಳಿನ ಅಡಿಪಾಯದ ಮೇಲೆ ನಿಂತಿದೆ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳಿನ ಮಾಲೀಕರಾದರೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆ ಸುಳ್ಳಿನ ಸಾಕ್ಷಿದಾರರು. ಸರ್ಕಾರ ಸಂಪೂರ್ಣವಾಗಿ ಸುಳ್ಳಿನ ರಾಜಕಾರಣದ ಮೇಲೆ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದ ರೈತರ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ರೈತರಿಗೆ ಸರ್ಕಾರದಿಂದ ಸಮರ್ಪಕ ನೆರವು ಸಿಗುತ್ತಿಲ್ಲ. ಹಾಲು ಉತ್ಪಾದಕರಿಗೆ ನೀಡಬೇಕಾದ ಪ್ರೋತ್ಸಾಹಧನವೂ ಇನ್ನೂ ಬಾಕಿಯಾಗಿದೆ ಎಂದು ಆರೋಪಿಸಿದರು.
ಇದೇ ವೇಳೆ ಕೃಷಿ ವೆಚ್ಚ ಹಾಗೂ ಬೀಜದ ಬೆಲೆ ಏರಿಕೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಟೀಕಿಸಿದರು.
ರೈತರ ಬದುಕು ಉಳಿಸುವ ಬದಲು ಸರ್ಕಾರ ರೈತರ ಆತ್ಮಹತ್ಯೆ ಭಾಗ್ಯ ನೀಡುವ ಕೆಲಸ ಮಾಡುತ್ತಿದೆ ಎಂದು ಶ್ರೀರಾಮುಲು ಆಕ್ರೋಶ ವ್ಯಕ್ತಪಡಿಸಿದರು. ರೈತರ ಸಾವಿನ ಅಂಕಿ-ಅಂಶಗಳನ್ನು ಉಲ್ಲೇಖಿಸಿದ ಅವರು, “ಇದು ಮಾನಗೆಟ್ಟ ಸರ್ಕಾರ. ರೈತರ ನೋವಿಗೆ ಸ್ಪಂದಿಸುವ ಬದಲು ರಾಜಕೀಯ ಸಮಾವೇಶಗಳಲ್ಲಿ ತೊಡಗಿಕೊಂಡಿದೆ” ಎಂದು ಆರೋಪಿಸಿದರು.



