ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಮುಂದುವರಿದಿದ್ದು, ಗುಡುಗು ಸಹಿತ ಬಿರುಗಾಳಿ ಮಳೆಯಿಂದ ಹಲವು ಜಿಲ್ಲೆಗಳಲ್ಲಿ ಅವಾಂತರಗಳು ಸಂಭವಿಸಿವೆ.
ಬೀದರ್ ಜಿಲ್ಲೆಯ ಅಣದೂರು ವಾಡಿ ಗ್ರಾಮದ ಬಳಿ ಇರುವ ಮಾಂಜ್ರಾ ವಾಟರ್ ಪಾರ್ಕ್‌ನಲ್ಲಿ ಗೋಡೆ ಕುಸಿದು ಬಿದ್ದು ಅನಾಹುತ ಸಂಭವಿಸಿದ್ದು, ಮಕ್ಕಳು ಹಾಗೂ ಮಹಿಳೆಯರು ಸೇರಿ 10ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅದೇ ಜಿಲ್ಲೆಯ ಕಮಠಾಣ ಗ್ರಾಮದಲ್ಲಿ ಮನೆಯ ಮೇಲ್ಛಾವಣಿ ಕುಸಿದು ಮೂವರು ಮಕ್ಕಳು ಗಾಯಗೊಂಡಿದ್ದಾರೆ.
ಗದಗ ಜಿಲ್ಲೆಯಲ್ಲಿ ಬಿರುಗಾಳಿ ಮಳೆಗೆ ಚವಡಿ ಕೂಟ ಬಳಿ ಮನೆಯ ಮೇಲಿದ್ದ ಸಿಂಟೆಕ್ಸ್ ಟ್ಯಾಂಕ್ ಹಾರಿ ಬಂದು ವಿದ್ಯುತ್ ತಂತಿಗೆ ತಗುಲಿ ನೇತಾಡಿದ ಘಟನೆ ನಡೆದಿದೆ.
ಕಲಬುರಗಿ ಜಿಲ್ಲೆಯ ಪಿಲ್ಲಿಗುಂಟಾ ತಾಂಡಾದಲ್ಲಿ ಸಿಡಿಲು ಬಡಿದು ಸುಮಾರು 25 ಮೇಕೆಗಳು ಸಾವನ್ನಪ್ಪಿವೆ.
ಚಿಕ್ಕೋಡಿ ಉಪ ವಿಭಾಗದಲ್ಲಿ ಸುರಿದ ಗಾಳಿ ಮಳೆಗೆ ಕಟಕಭಾವಿ ಗ್ರಾಮದಲ್ಲಿ ಮನೆಯ ಮೇಲ್ಛಾವಣಿ ಹಾರಿಹೋಗಿದೆ. ಬಳ್ಳಾರಿ ನಗರದಲ್ಲೂ ಮಳೆ ಅವಾಂತರ ಉಂಟಾಗಿದ್ದು, ಹಲವು ಕಡೆ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ. ಬೃಹತ್ ಮರ ಬಿದ್ದು ಎರಡು ಕಾರುಗಳು ಜಖಂ ಆಗಿವೆ. ಕನಕ ದುರ್ಗಮ್ಮ ದೇವಸ್ಥಾನಕ್ಕೆ ಹೋಗುವ ರಸ್ತೆ ಹಾಗೂ ರೈಲ್ವೆ ಅಂಡರ್‌ಪಾಸ್‌ನಲ್ಲಿ ನೀರು ನಿಂತು ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.
ಚಿತ್ರದುರ್ಗದಲ್ಲೂ ಮಳೆಯಿಂದ ಮುಖ್ಯರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರಕ್ಕೆ ತೀವ್ರ ಅಡ್ಡಿಯಾಗಿದೆ.
ಇನ್ನು ರಾಜಧಾನಿ ಬೆಂಗಳೂರಿನ ಸದಾಶಿವನಗರದಲ್ಲಿ ಗಾಳಿ ಮಳೆಗೆ ಬೃಹತ್ ಮರ ಕಾರಿನ ಮೇಲೆ ಉರುಳಿದ ಘಟನೆ ವರದಿಯಾಗಿದೆ. ಮಳೆ ಮುಂದುವರಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಎಚ್ಚರಿಕೆಯಿಂದ ಇರಲು ಸೂಚಿಸಿದೆ.



