HomeGadag Newsಆನ್‌ಲೈನ್ ಔಷಧಿ ಮಾರಾಟಕ್ಕೆ ಬ್ರೇಕ್ ಹಾಕಿ!

ಆನ್‌ಲೈನ್ ಔಷಧಿ ಮಾರಾಟಕ್ಕೆ ಬ್ರೇಕ್ ಹಾಕಿ!

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕಾಮರ್ಸ್ ಹಾಗೂ ಆನ್‌ಲೈನ್ ಮೂಲಕ ಕಾನೂನುಬಾಹಿರವಾಗಿ ನಡೆಯುತ್ತಿರುವ ಔಷಧಿ ಮಾರಾಟವನ್ನು ಸಂಪೂರ್ಣ ನಿಷೇಧಿಸಬೇಕೆಂದು ಆಗ್ರಹಿಸಿ ಅಖಿಲ ಭಾರತ ಔಷಧ ವ್ಯಾಪಾರಸ್ಥರ ಸಂಘ ನೀಡಿದ್ದ ಬಂದ್ ಕರೆಗೆ ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಯಿತು.
ಬುಧವಾರ ಬೆಳಗ್ಗಿನಿಂದಲೇ ಜಿಲ್ಲೆಯಾದ್ಯಂತ ಔಷಧ ವ್ಯಾಪಾರಸ್ಥರು ತಮ್ಮ ಮೆಡಿಕಲ್ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಆನ್‌ಲೈನ್ ಔಷಧಿ ಮಾರಾಟದಿಂದ ಸಾರ್ವಜನಿಕರ ಆರೋಗ್ಯಕ್ಕೆ ಅಪಾಯ ಎದುರಾಗಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಗಾಂಧಿ ವೃತ್ತದಿಂದ ಆರಂಭವಾದ ಔಷಧ ವ್ಯಾಪಾರಸ್ಥರ ಬೃಹತ್ ಬೈಕ್ ರ‌್ಯಾಲಿ ಟಾಂಗಾಕೂಟ, ಜೋಡಮಾರುತಿ ದೇವಸ್ಥಾನ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜಿಲ್ಲಾಡಳಿತ ಭವನ ತಲುಪಿತು. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಜಿಲ್ಲಾ ಔಷಧ ವ್ಯಾಪಾರಸ್ಥರ ಮುಖಂಡ ರಾಮನಗೌಡ ದಾನಪ್ಪಗೌಡ್ರ, ಇ-ಕಾಮರ್ಸ್ ಆನ್‌ಲೈನ್ ವ್ಯವಸ್ಥೆಯಲ್ಲಿ ಚೈನ್ ಸಿಸ್ಟಮ್ ದುರ್ಬಳಕೆಯಾಗುತ್ತಿದೆ ಎಂದು ಆರೋಪಿಸಿದರು. ಸಾರ್ವಜನಿಕರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಕೆಲವು ಆನ್‌ಲೈನ್ ಸಂಸ್ಥೆಗಳು ನಕಲಿ ಹಾಗೂ ಗುಣಮಟ್ಟವಿಲ್ಲದ ಔಷಧಿಗಳನ್ನು ರಾಜಾರೋಷವಾಗಿ ಮಾರಾಟ ಮಾಡುತ್ತಿವೆ. ನಾರ್ಕೋಟಿಕ್ಸ್ ಹಾಗೂ ಆಂಟಿಬಯೋಟಿಕ್ ಔಷಧಿಗಳನ್ನೂ ನಿರ್ಬಂಧವಿಲ್ಲದೇ ವಿತರಿಸಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೆಲವು ಆನ್‌ಲೈನ್ ಕಂಪನಿಗಳು ವೈದ್ಯರ ಅಧಿಕೃತ ಪ್ರಿಸ್ಕ್ರಿಪ್ಷನ್ ಇಲ್ಲದೇ ಔಷಧಿಗಳನ್ನು ರವಾನಿಸುತ್ತಿವೆ. ಇನ್ನೂ ಕೆಲವು ಕಡೆ ನಕಲಿ ವೈದ್ಯಕೀಯ ಚೀಟಿಗಳನ್ನು ಸೃಷ್ಟಿಸಿ ಔಷಧಿ ವಿತರಿಸಿರುವ ಪ್ರಕರಣಗಳೂ ಬೆಳಕಿಗೆ ಬಂದಿವೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಜ್ಞಾನೇಶ್ವರ್ ಖೋಕಲೆ, ಎಂ.ಡಿ. ಕಾಬಳ್ಳಿ, ಮಹದೇಗೌಡ ಲಿಂಗನಗೌಡ, ಸುರೇಶ ನಡುಗುಂದಿ, ರಂಜಾನ್ ಸಾಬ್ ನದಾಫ್, ಬರಡ್ಡಿ ಪಂಕಜ್ವಾರ್ಕರ್, ಜಾಫರ್ ಹೊಂಬಾಳ್, ಪುರುಷೋತ್ತಮ ಪುಣ್ಯ, ವಿಕ್ರಂ ಜೈನ್, ಸುರೇಂದ್ರ ಪತೇಪುರ್, ವಿನೋದ್ ಜೈನ್, ಉಮೇಶ್ ತುಪ್ಪದ, ಗಣೇಶ್ ಕಬಾಡಿ, ರಾಜಣ್ಣ ತ್ರಿಮಲೆ, ಭೀಮನಗೌಡ, ಶಪಿ ಕೊಪ್ಪಳ, ರಾಜು ಚೋಳಿ, ಅನಿಲ್ ಕುಣಿಕರ್, ಅನಿಲ್ ಬೂದಿಹಾಳ, ನಿವೃತ್ತಿನಾಥ್ ಖೋಕಲೆ, ಮಲ್ಲನಗೌಡ, ಸುರೇಶ ನಿಡಗುಂದಿ ಸೇರಿದಂತೆ ಜಿಲ್ಲೆಯ ನೂರಾರು ಮೆಡಿಕಲ್ ಹಾಗೂ ಫಾರ್ಮಾ ಸಂಸ್ಥೆಗಳ ಮಾಲೀಕರು ಹಾಗೂ ಪ್ರತಿನಿಧಿಗಳು ಭಾಗವಹಿಸಿದ್ದರು.
“ಸಾರ್ವಜನಿಕರ ಪ್ರಾಣಕ್ಕೆ ಕುತ್ತು ತರುತ್ತಿರುವ ಈ ಇ-ಕಾಮರ್ಸ್ ಔಷಧಿ ವಿತರಣಾ ವ್ಯವಸ್ಥೆಯನ್ನು ಸರ್ಕಾರ ತಕ್ಷಣ ಶಾಶ್ವತವಾಗಿ ಬಂದ್ ಮಾಡಬೇಕು”
ರಾಮನಗೌಡ ದಾನಪ್ಪಗೌಡ್ರ
ಜನೌಷಧಿ ಕೇಂದ್ರಗಳಿಂದ ಸೇವೆ ಮುಂದುವರಿಕೆ
ಜಿಲ್ಲಾದ್ಯಂತ ಖಾಸಗಿ ಮೆಡಿಕಲ್ ಸ್ಟೋರ್‌ಗಳು ಬಂದ್ ಆಗಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ನಗರದ ಟಾಂಗಾಕೂಟ ಹಾಗೂ ಪೊಲೀಸ್ ಠಾಣೆ ಆವರಣದಲ್ಲಿರುವ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳು ಎಂದಿನಂತೆ ಕಾರ್ಯನಿರ್ವಹಿಸಿ ಸಾರ್ವಜನಿಕರಿಗೆ ಸೇವೆ ನೀಡಿದವು.

Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!