ಲಕ್ನೋ: ಉತ್ತರ ಪ್ರದೇಶದ ಬುಂದೇಲ್ಖಂಡ ಪ್ರದೇಶದ ಬಂಡಾ ನಗರವು ಭಾರೀ ಉಷ್ಣ ಅಲೆಯಿಂದ ತತ್ತರಿಸಿದ್ದು, ವಿಶ್ವದಲ್ಲೇ ಅತ್ಯಂತ ಹೆಚ್ಚಿನ ತಾಪಮಾನ ದಾಖಲಾದ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.
ಇತ್ತೀಚೆಗೆ ಇಲ್ಲಿ ಬರೋಬ್ಬರಿ 48 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಇದು ಗಮನ ಸೆಳೆದಿದೆ.
ಈ ಮೂಲಕ ಈವರೆಗಿನ ಹಳೆಯ ದಾಖಲೆಗಳು ಮುರಿದಿದ್ದು, 75 ವರ್ಷಗಳ ಹಿಂದಿನ 1951ರಲ್ಲಿ ದಾಖಲಾಗಿದ್ದ 47.4 ಡಿಗ್ರಿ ಸೆಲ್ಸಿಯಸ್ ದಾಖಲೆಯನ್ನೂ ಮೀರಿಸಿದೆ. ಅದಕ್ಕೂ ಮುನ್ನ ಏಪ್ರಿಲ್ 27ರಂದು 47.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು.
ಬಂಡಾ ನಗರದಲ್ಲಿ ಗರಿಷ್ಠ ಮಟ್ಟದ ಉಷ್ಣಾಂಶ ದಾಖಲಾಗುತ್ತಿರುವುದು ಇದೇ ಮೊದಲಲ್ಲವಾದರೂ, ಈ ಬಾರಿಯ ತೀವ್ರತೆ ಅತಿಹೆಚ್ಚಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ತೀವ್ರ ಬಿಸಿಲಿನ ಪರಿಣಾಮ ಮಧ್ಯಾಹ್ನದ ವೇಳೆಗೆ ಅಂಗಡಿ-ಮುಂಗಟ್ಟುಗಳು ಹಾಗೂ ವ್ಯಾಪಾರ ಸಂಸ್ಥೆಗಳು ಮುಚ್ಚಲಾಗುತ್ತಿದ್ದು, ನಗರದಲ್ಲಿ ಅಘೋಷಿತ ಕರ್ಫ್ಯೂ ಮಾದರಿಯ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕರು ಅಗತ್ಯವಿಲ್ಲದ ಹೊರಗೆ ಹೋಗುವುದನ್ನು ತಪ್ಪಿಸುತ್ತಿದ್ದಾರೆ.



