ನವದೆಹಲಿ: ನೀಟ್ ಯುಜಿ 2026 ಭೌತಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ತಜ್ಞರೊಬ್ಬರನ್ನು ಸಿಬಿಐ ಬಂಧಿಸಿದೆ.
ಬಂಧಿತ ಆರೋಪಿಯನ್ನು ಮನೀಷಾ ಸಂಜಯ್ ಹವಾಲ್ದಾರ್ ಎಂದು ಗುರುತಿಸಲಾಗಿದ್ದು, ಅವರು ಮಹಾರಾಷ್ಟ್ರದ ಪುಣೆಯ ಸೇಥ್ ಹಿರಾಲಾಲ್ ಸರಾಫ್ ಪ್ರಶಾಲಾದಲ್ಲಿ ಉದ್ಯೋಗದಲ್ಲಿದ್ದರು. ಜೊತೆಗೆ, ಎನ್‌ಟಿಎ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.
ಸಿಬಿಐ ತನಿಖೆ ವೇಳೆ, ಹವಾಲ್ದಾರ್ ಅವರು ಮೇ 16ರಂದು ಬಂಧಿತಳಾಗಿದ್ದ ಸಹ-ಆರೋಪಿ ಮನೀಷಾ ಮಾಂಧರೆ ಜೊತೆ ನೀಟ್ ಯುಜಿ ಪರೀಕ್ಷೆಯ ಭೌತಶಾಸ್ತ್ರ ಪ್ರಶ್ನೆಗಳನ್ನು ಹಂಚಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ಹಂಚಿಕೊಂಡಿದ್ದ ಪ್ರಶ್ನೆಗಳು ನೀಟ್ ಯುಜಿ 2026ರ ಭೌತಶಾಸ್ತ್ರ ಪ್ರಶ್ನೆಪತ್ರಿಕೆಯಲ್ಲಿ ಬಂದ ಪ್ರಶ್ನೆಗಳೊಂದಿಗೆ ಹೊಂದಿಕೆಯಾಗಿವೆ ಎಂದು ತನಿಖೆಯಲ್ಲಿ ಪತ್ತೆಯಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಹವಾಲ್ದಾರ್ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಸಿಬಿಐ ಶಂಕಿಸಿದೆ.
ಈ ಹಿಂದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆಯ ಸಸ್ಯಶಾಸ್ತ್ರ ಶಿಕ್ಷಕಿ ಮನೀಷಾ ಮಾಂಧರೆಯನ್ನು ಮೇ 16ರಂದು ಸಿಬಿಐ ಬಂಧಿಸಿತ್ತು. ಇದೀಗ ಮತ್ತೊಬ್ಬ ಎನ್‌ಟಿಎ ತಜ್ಞರ ಬಂಧನದಿಂದ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ.
ಪ್ರಕರಣದ ಕುರಿತು ಸಿಬಿಐ ತನಿಖೆ ಮುಂದುವರಿಸಿದ್ದು, ಇನ್ನಷ್ಟು ಆರೋಪಿಗಳ ಸಂಪರ್ಕದ ಕುರಿತು ಮಾಹಿತಿ ಕಲೆಹಾಕುತ್ತಿದೆ.



