ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿಯ ವಿದ್ಯುತ್ ಚಾಲಿತ ಮಗ್ಗಗಳಿಗೆ ಸರ್ಕಾರ 10 ಹೆಚ್.ಪಿ ವರೆಗೆ ಉಚಿತ ವಿದ್ಯುತ್ ಯೋಜನೆ ಜಾರಿಗೊಳಿಸಿದ್ದರೂ, ಇತ್ತೀಚೆಗೆ ಹೆಚ್ಚುವರಿ ವಿದ್ಯುತ್ ಬಿಲ್ಗಳು ಬರುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ವತಿಯಿಂದ ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮುಳಗುಂದ ನಾಕಾದ ಹೆಸ್ಕಾಂ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರರಿಗೆ ಸಲ್ಲಿಸಿದ ಮನವಿಯಲ್ಲಿ, ವೃತ್ತಿಪರ ನೇಕಾರರಿಗೆ ಸರ್ಕಾರ ನೀಡಿರುವ ಉಚಿತ ವಿದ್ಯುತ್ ಸೌಲಭ್ಯವನ್ನು ಯಾವುದೇ ಷರತ್ತಿಲ್ಲದೆ ಸಂಪೂರ್ಣ ಜಾರಿಗೆ ತರಬೇಕು ಎಂದು ಆಗ್ರಹಿಸಲಾಯಿತು.
ಈ ವೇಳೆ ಮಾತನಾಡಿದ ರಾಜು ಧಡಿ, ಗದಗ-ಬೆಟಗೇರಿ ಸೇರಿದಂತೆ ರಾಜ್ಯದ ಎಲ್ಲ ವೃತ್ತಿಪರ ನೇಕಾರರಿಗೆ 10 ಹೆಚ್.ಪಿ ವರೆಗೆ ಉಚಿತ ವಿದ್ಯುತ್ ನೀಡುವಂತೆ ಸರ್ಕಾರ ಆದೇಶ ಹೊರಡಿಸಿದೆ ಎಂದು ಹೇಳಿದರು.
10 ಹೆಚ್.ಪಿ ಮೀರಿದ ವಿದ್ಯುತ್ ಚಾಲಿತ ಮಗ್ಗಗಳಿಗೆ ಮಾತ್ರ ಪ್ರತಿ ಯೂನಿಟ್ಗೆ 1 ರೂಪಾಯಿ 25 ಪೈಸೆ ದರ ನಿಗದಿಯಾಗಿದೆ. ಆದರೆ ಇತ್ತೀಚೆಗೆ 10 ಹೆಚ್.ಪಿ ವ್ಯಾಪ್ತಿಯ ಮಗ್ಗ ಘಟಕಗಳಿಗೂ ಹಣ ಪಾವತಿಸುವಂತೆ ಬಿಲ್ಗಳು ಬರುತ್ತಿವೆ ಎಂದು ದೂರಿದರು.
“ಸರ್ಕಾರ ಕೊಟ್ಟು ಕಿತ್ತುಕೊಳ್ಳುವ ನೀತಿ ಅನುಸರಿಸಬಾರದು. ರಾಜ್ಯದ ವಿದ್ಯುತ್ ಚಾಲಿತ ಮಗ್ಗಗಳಿಗೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸದೆ ಸಂಪೂರ್ಣ ಉಚಿತ ಜೀರೋ ಬಿಲ್ ನೀಡಬೇಕು” ಎಂದು ಒತ್ತಾಯಿಸಿದರು.
ಇನ್ನು ಮುಂದೆ ಹೆಸ್ಕಾಂ ಇಲಾಖೆಯಿಂದ ಹಣ ಪಾವತಿಸುವಂತೆ ಬಿಲ್ಗಳು ಬಂದರೆ ಅದಕ್ಕೆ ಸರ್ಕಾರವೇ ಸಂಪೂರ್ಣ ಜವಾಬ್ದಾರಿಯಾಗಿರುತ್ತದೆ. ನೇಕಾರರು ಯಾವುದೇ ಹಣ ಪಾವತಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ವಿರುಪಾಕ್ಷಪ್ಪ ಐಲಿ, ನಗರಸಭಾ ಸದಸ್ಯ ಮಾಧುಸಾ ಮೇರವಾಡೆ, ನಾರಾಯಣಪ್ಪ, ಕೃಷ್ಣ ಕೊಪ್ಪರದ, ಈರಣ್ಣ ಕೋನಾ, ನಾರಾಯಣ ಗೋಟೂರ, ಬಸವರಾಜ ಕರಿ, ಟಿ.ಎಂ. ಮೇರವಾಡೆ, ಪಿ.ಸಿ. ಹೀನಾಯಿ, ರಾಘವೇಂದ್ರ ಕಿನಿಲಿ, ನಾರಾಯಣ ಎಸ್. ಜುಟ್ಲಾ, ವೆಂಕಟೇಶ ಸಿಂಪಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



