ಕೋಲಾರ: ಕೋಲಾರ ಜಿಲ್ಲೆಯಲ್ಲಿ ಕೃಷಿ ಹೊಂಡಗಳ ದುರಂತ ಮುಂದುವರಿದಿದ್ದು, ಮಾಲೂರು ತಾಲೂಕಿನ ಕೊತ್ತೂರು ಗ್ರಾಮದಲ್ಲಿ ಇಬ್ಬರು ಸಹೋದರರು ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಕಳೆದ 20 ದಿನಗಳಲ್ಲಿ ಇದೇ ರೀತಿಯ ಘಟನೆಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
ದೇವಕಿರಣ್ (12) ಮತ್ತು ವಿನುತ್ (9) ಮೃತ ಬಾಲಕರು. ಬೇಸಿಗೆ ರಜೆ ಹಿನ್ನೆಲೆಯಲ್ಲಿ ತಾತನ ಮನೆಗೆ ಬಂದಿದ್ದ ಇಬ್ಬರೂ ಆಟವಾಡುತ್ತಿದ್ದ ವೇಳೆ ಕಾಲುಜಾರಿ ಕೃಷಿ ಹೊಂಡಕ್ಕೆ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.
ಕೃಷಿ ಹೊಂಡಗಳಿಗೆ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಆರ್ ರವಿ ಈಗಾಗಲೇ ಸೂಚನೆ ನೀಡಿದ್ದರೂ, ಜಿಲ್ಲೆಯಲ್ಲಿ ನಿರ್ಲಕ್ಷ್ಯ ಮುಂದುವರಿದಿದೆ ಎಂಬ ಆರೋಪ ಕೇಳಿಬಂದಿದೆ. ತಂತಿ ಬೇಲಿ ಹಾಗೂ ರಕ್ಷಣಾ ವ್ಯವಸ್ಥೆ ಇಲ್ಲದ ಕಾರಣ ನಿರಂತರವಾಗಿ ಅಮಾಯಕರು ಬಲಿಯಾಗುತ್ತಿದ್ದಾರೆ.
ಈ ತಿಂಗಳಲ್ಲೇ ಬಂಗಾರಪೇಟೆ, ಶ್ರೀನಿವಾಸಪುರ ಹಾಗೂ ಮಾಲೂರು ಭಾಗಗಳಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಮಕ್ಕಳು ಮತ್ತು ಯುವಕರು ಸೇರಿ ಹಲವರು ಮೃತಪಟ್ಟಿದ್ದರು. ಈಗ ಮತ್ತೊಮ್ಮೆ ಇಬ್ಬರು ಬಾಲಕರು ಬಲಿಯಾಗಿರುವುದು ಜಿಲ್ಲೆಯಲ್ಲಿ ಆತಂಕ ಹೆಚ್ಚಿಸಿದೆ.
ಸುರಕ್ಷತಾ ನಿಯಮಗಳನ್ನು ಪಾಲಿಸದ ಕೃಷಿ ಹೊಂಡಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.



