ನರಗುಂದದಲ್ಲಿ ಕೋಮುದ್ವೇಷ; ಯುವಕನಿಗೆ ಚೂರಿ ಇರಿದು ಕೊಲೆ, ಮತ್ತೊಬ್ಬ ಗಂಭೀರ ಗಾಯ

Vijayasakshi (Gadag News) :

ವಿಜಯಸಾಕ್ಷಿ ಸುದ್ದಿ, ಗದಗ:

ಕಳೆದ ಹಲವು ‌ದಿನಗಳಿಂದ ಜಿಲ್ಲೆಯ ‌ನರಗುಂದ ಪಟ್ಟಣದಲ್ಲಿ ಎರಡು ಸಮುದಾಯಗಳ ಮಧ್ಯ ನಡೆಯುತ್ತಿರುವ ಜಗಳಕ್ಕೆ ಯುವಕನೊಬ್ಬ ಬಲಿಯಾಗಿದ್ದಾನೆ.

ನಿನ್ನೆ ರಾತ್ರಿ ‌ಕೋಮುದ್ವೇಷದಿಂದ ಯುವಕರ ಒಂದು ಗುಂಪು ಎದುರಾಳಿಯ ಸಮುದಾಯದ ಸಿಕ್ಕ ಸಿಕ್ಕವರ ಮೇಲೆ ಚೂರಿ ಇರಿದಿದೆ. ಇದರಿಂದಾಗಿ ಒಂದು ಸಮುದಾಯದ ಇಬ್ಬರು ಯುವಕರಿಗೆ ಚೂರಿ ಇರಿದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡಿದ್ದರು.

ಪಟ್ಟಣದ ಶಮೀರ್ ಶಹಪೂರ್ ಹಾಗೂ ಶಮ್ ಶೇರ್ ಖಾನ್ ಪಠಾಣ್ ಎಂಬುವವರಿಗೆ ಚೂರಿ ಇರಿದಿದ್ದು,
ಇಬ್ಬರಿಗೂ ಎದೆ ಹಾಗೂ ಬೆನ್ನ ಮೇಲೆ ಗಂಭೀರ ಗಾಯಗಳಾಗಿದ್ದವು. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತಾದರೂ, ಶಮೀರ್ ಶಹಪೂರ್ (19) ಎಂಬಾತ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಈ ಕುರಿತು ಎಸ್ಪಿ ಶಿವಪ್ರಕಾಶ್ ದೇವರಾಜು ಖಚಿತ ಪಡಿಸಿದ್ದಾರೆ.

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಇಬ್ಬರು ಯುವಕರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಶಮೀರ್ ಶಹಪೂರ್ ಗೆ ಎದೆಯ ಭಾಗದಲ್ಲಿ ಗಂಭೀರ ಗಾಯವಾಗಿದ್ದ ಕಾರಣಕ್ಕೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ. ಇನ್ನೋರ್ವ ಯುವಕನಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟ‌ನೆಯಿಂದ ಕಳೆದ ಮೂರು ದಿನಗಳಿಂದ ನರಗುಂದ ಪಟ್ಟಣದ ವಾತಾವರಣ ಬೂದಿ ಮುಚ್ಚಿದ ಕೆಂಡದಂತಿದೆ. ಇನ್ನು ಎರಡು ಸಮುದಾಯದ ಯುವಕರ ಗಲಾಟೆಗೆ ಕಡಿವಾಣ ಹಾಕಬೇಕಿದ್ದ ಪೊಲೀಸರು ಸುಮ್ಮನಿದ್ದರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಅಲ್ಲದೇ, ಪಟ್ಟಣದಲ್ಲಿ ಅಶಾಂತಿ ಸೃಷ್ಟಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ