ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದು ಬಹುತೇಕ ಖಚಿತವಾಗಿದೆ. ರಾಜ್ಯ ರಾಜಕೀಯದಲ್ಲಿ ಹಲವು ದಿನಗಳಿಂದ ನಡೆಯುತ್ತಿದ್ದ ಚರ್ಚೆಗಳಿಗೆ ಇದೀಗ ಅಧಿಕೃತ ಸ್ಪಷ್ಟತೆ ಸಿಕ್ಕಂತಾಗಿದೆ.
ಸಿದ್ದರಾಮಯ್ಯ ಅವರು ನಾಳೆ ಬೆಳಗ್ಗೆ 11:30ಕ್ಕೆ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ರಾಜೀನಾಮೆ ಕುರಿತ ವೇಳಾಪಟ್ಟಿಯೂ ಇದೀಗ ಸ್ಪಷ್ಟವಾಗಿರುವುದು ರಾಜಕೀಯ ವಲಯದಲ್ಲಿ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ರಾಜೀನಾಮೆ ಸಲ್ಲಿಸುವ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಚಿವರು ಹಾಗೂ ಆಪ್ತ ಶಾಸಕರಿಗೆ ಉಪಹಾರ ಕೂಟಕ್ಕೆ ಆಹ್ವಾನ ನೀಡಿದ್ದಾರೆ. ಈ ಬ್ರೇಕ್ಫಾಸ್ಟ್ ಸಭೆಯಲ್ಲಿ ಮುಂದಿನ ರಾಜಕೀಯ ಬೆಳವಣಿಗೆಗಳು ಹಾಗೂ ಪಕ್ಷದ ಒಳಚರ್ಚೆಗಳ ಬಗ್ಗೆ ಸಮಾಲೋಚನೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಬಳಿಕ ರಾಜಭವನಕ್ಕೆ ತೆರಳಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿರುವ ಸಿದ್ದರಾಮಯ್ಯ, ನಂತರ ಸುದ್ದಿಗೋಷ್ಠಿ ನಡೆಸಿ ರಾಜ್ಯ ರಾಜಕೀಯದ ಇತ್ತೀಚಿನ ಬೆಳವಣಿಗೆಗಳು ಹಾಗೂ ತಮ್ಮ ನಿರ್ಧಾರದ ಕುರಿತು ಸ್ಪಷ್ಟನೆ ನೀಡುವ ಸಾಧ್ಯತೆಯಿದೆ.
ಇದೇ ವೇಳೆ ಇಂದು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ 62ನೇ ಪುಣ್ಯತಿಥಿ ಅಂಗವಾಗಿ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಗವಹಿಸಿದ್ದರು. ನೆಹರು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಅವರು, ದೇಶದ ಅಭಿವೃದ್ಧಿಗೆ ನೆಹರು ನೀಡಿದ ಕೊಡುಗೆಯನ್ನು ಸ್ಮರಿಸಿದರು.
ಕಾರ್ಯಕ್ರಮದ ಬಳಿಕ ಮಾಧ್ಯಮಗಳು ದೆಹಲಿ ಪ್ರವಾಸ ಹಾಗೂ ರಾಜ್ಯ ರಾಜಕೀಯದ ಬೆಳವಣಿಗೆಗಳ ಬಗ್ಗೆ ಪ್ರಶ್ನಿಸಿದರೂ, ಮುಖ್ಯಮಂತ್ರಿ ಯಾವುದೇ ವಿವರವಾದ ಪ್ರತಿಕ್ರಿಯೆ ನೀಡಲಿಲ್ಲ. ರಾಜಕೀಯ ಬೆಳವಣಿಗೆಗಳ ಕುರಿತು ಪ್ರಶ್ನೆ ಕೇಳಿದಾಗ, ನಾಳೆ ಮಾತನಾಡುತ್ತೇನೆ, ಏನೇ ಇದ್ದರೂ ನಾಳೆಯೇ ಮಾತನಾಡುತ್ತೇನೆ ಎಂದು ಒಂದೇ ಸಾಲಿನಲ್ಲಿ ಉತ್ತರಿಸಿ ಸಿದ್ದರಾಮಯ್ಯ ಅಲ್ಲಿಂದ ತೆರಳಿದ್ದರು.



