ಭಾರತೀಯ ಚಿತ್ರರಂಗದ ಸೂಪರ್ಸ್ಟಾರ್ ರಜನಿಕಾಂತ್ ಅವರ ಹಳೆಯ ಬಸ್ ಕಂಡಕ್ಟರ್ ಐಡಿ ಕಾರ್ಡ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ತಲೈವಾ ಸಿನಿ ಜೀವನ ಆರಂಭಕ್ಕೂ ಮುನ್ನ ನಡೆಸಿದ್ದ ಸಾಮಾನ್ಯ ಜೀವನದ ಕಥೆ ಮತ್ತೆ ಚರ್ಚೆಗೆ ಬಂದಿದೆ.
ವೈರಲ್ ಆಗಿರುವ ಗುರುತಿನ ಚೀಟಿಯಲ್ಲಿ ‘ಶಿವಾಜಿ ರಾವ್ ಗಾಯಕ್ವಾಡ್’ ಎಂಬ ಹೆಸರಿನೊಂದಿಗೆ ಅವರು ಬೆಂಗಳೂರಿನ ಬಿಟಿಎಸ್ ಸಾರಿಗೆ ಸಂಸ್ಥೆಯಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಮಾಹಿತಿ ಇದೆ. ಶ್ರೀನಗರ ಡಿಪೋ ವ್ಯಾಪ್ತಿಯ 10A ರೂಟ್ನಲ್ಲಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು.
1971ರಲ್ಲಿ ಸೇವೆಗೆ ಸೇರಿದಾಗ ಅವರಿಗೆ ತಿಂಗಳಿಗೆ ಕೇವಲ ₹275 ಸಂಬಳ ಸಿಗುತ್ತಿತ್ತು. ಆದರೆ ಟಿಕೆಟ್ ಕೊಡುವಾಗ ತೋರಿಸುತ್ತಿದ್ದ ವಿಶಿಷ್ಟ ಸ್ಟೈಲ್ ಮತ್ತು ಧ್ವನಿಯೇ ಅವರನ್ನು ಸಾಮಾನ್ಯ ಕಂಡಕ್ಟರ್ಗಿಂತ ವಿಭಿನ್ನವಾಗಿಸಿತ್ತು.
ನಂತರ ಮದ್ರಾಸ್ ಫಿಲ್ಮ್ ಇನ್ಸ್ಟಿಟ್ಯೂಟ್ ಸೇರಿ, ನಿರ್ದೇಶಕ ಕೆ. ಬಾಲಚಂದರ್ ಅವರ ಮೂಲಕ ಚಿತ್ರರಂಗ ಪ್ರವೇಶಿಸಿದ ಶಿವಾಜಿ ರಾವ್, ‘ರಜನಿಕಾಂತ್’ ಎಂಬ ಹೆಸರಿನಲ್ಲಿ ವಿಶ್ವಪ್ರಸಿದ್ಧ ನಟರಾದರು.
ಇಂದು ಸಾವಿರಾರು ಕೋಟಿ ಮೌಲ್ಯದ ಬ್ರ್ಯಾಂಡ್ ಆಗಿರುವ ರಜನಿಕಾಂತ್ ಅವರ ಈ ಹಳೆಯ ಐಡಿ ಕಾರ್ಡ್ ಅಭಿಮಾನಿಗಳಿಗೆ ಭಾವನಾತ್ಮಕ ಕ್ಷಣಗಳನ್ನು ನೀಡಿದೆ. ‘ಒಬ್ಬ ಸಾಮಾನ್ಯ ಯುವಕನ ಕನಸು ಹೇಗೆ ಇತಿಹಾಸವಾಯಿತು’ ಎಂಬ ಚರ್ಚೆ ಈಗ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ.



