ಶಿವಮೊಗ್ಗ: ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಮೃತರನ್ನು ಈರಣ್ಣ ಗುಡಾದಾರ್ (26) ಎಂದು ಗುರುತಿಸಲಾಗಿದೆ.
ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನವರಾದ ಈರಣ್ಣ ಗುಡಾದಾರ್ ಕಳೆದ ಏಳು ವರ್ಷಗಳಿಂದ ಕೆಎಸ್ಆರ್ಪಿ 8ನೇ ಪಡೆಯ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಘಟನೆ ವೇಳೆ ಏಕಾಏಕಿ ಕುಸಿದು ಬಿದ್ದ ಈರಣ್ಣರನ್ನು ಸಹೋದ್ಯೋಗಿಗಳು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದರು. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಇನ್ನಷ್ಟು ದುಃಖಕರ ಸಂಗತಿಯೆಂದರೆ, ಈರಣ್ಣ ಗುಡಾದಾರ್ ಅವರು ಕೇವಲ 18 ದಿನಗಳ ಹಿಂದಷ್ಟೇ ಅದ್ದೂರಿಯಾಗಿ ವಿವಾಹವಾಗಿದ್ದರು. ಯುವ ಪೊಲೀಸ್ ಸಿಬ್ಬಂದಿಯ ಅಕಾಲಿಕ ನಿಧನ ಕುಟುಂಬಸ್ಥರು, ಸ್ನೇಹಿತರು ಹಾಗೂ ಪೊಲೀಸ್ ವಲಯದಲ್ಲಿ ತೀವ್ರ ದುಃಖಕ್ಕೆ ಕಾರಣವಾಗಿದೆ.



