ದಳಪತಿ ವಿಜಯ್ ಅಭಿನಯದ ಕೊನೆಯ ಸಿನಿಮಾ ‘ಜನ ನಾಯಗನ್’ ಬಿಡುಗಡೆಯ ಕುರಿತು ಹೊಸ ಅಪ್‌ಡೇಟ್ ಹೊರಬಿದ್ದಿದ್ದು, ಸಿನಿಮಾ ಜೂನ್ 19ರಂದು ತೆರೆಗೆ ಬರಲಿದೆ ಎನ್ನುವ ಸುದ್ದಿ ಕಾಲಿವುಡ್‌ನಲ್ಲಿ ಭಾರೀ ಸಂಚಲನ ಮೂಡಿಸಿದೆ.
ರಾಜಕೀಯ ಪ್ರವೇಶದ ಬಳಿಕ ಚಿತ್ರರಂಗಕ್ಕೆ ವಿದಾಯ ಹೇಳಿದ್ದ ವಿಜಯ್, ‘ಜನ ನಾಯಗನ್’ ನನ್ನ ಅಂತಿಮ ಸಿನಿಮಾ ಎಂದು ಘೋಷಿಸಿದ್ದರು. ಆದರೆ ಹಲವು ಕಾರಣಗಳಿಂದ ಚಿತ್ರದ ಬಿಡುಗಡೆ ವಿಳಂಬವಾಗಿತ್ತು. ಇದೀಗ ಸೆನ್ಸಾರ್ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ನಿರ್ಮಾಪಕರು ಬಿಡುಗಡೆ ದಿನಾಂಕ ನಿಗದಿ ಮಾಡಿದ್ದಾರೆ ಎನ್ನಲಾಗಿದೆ.
ಈ ಚಿತ್ರದ ಮತ್ತೊಂದು ವಿಶೇಷವೆಂದರೆ, ವಿಜಯ್ ಸರ್ಕಾರ ಇತ್ತೀಚೆಗೆ ಹೊಸ ಸಿನಿಮಾಗಳಿಗೆ ಮೊದಲ ವಾರ ದಿನಕ್ಕೆ ಐದು ಪ್ರದರ್ಶನಗಳಿಗೆ ಅನುಮತಿ ನೀಡಿರುವುದು. ಇದರಿಂದ ‘ಜನ ನಾಯಗನ್’ಗೆ ಭರ್ಜರಿ ಓಪನಿಂಗ್ ಸಿಗುವ ನಿರೀಕ್ಷೆ ಇದೆ.
ಆದರೆ ಈ ಬೆಳವಣಿಗೆ ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’ ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ. ಎರಡೂ ಸಿನಿಮಾಗಳು ಒಂದೇ ದಿನ ಬಿಡುಗಡೆಯಾದರೆ ಬಾಕ್ಸ್ ಆಫೀಸ್‌ನಲ್ಲಿ ನೇರ ಪೈಪೋಟಿ ಎದುರಾಗಲಿದೆ. ಹೀಗಾಗಿ ಸಮಂತಾ ಚಿತ್ರದ ಬಿಡುಗಡೆ ದಿನಾಂಕ ಮತ್ತೆ ಬದಲಾಗಬಹುದು ಎನ್ನಲಾಗುತ್ತಿದೆ.
‘ಜನ ನಾಯಗನ್’ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿದ್ದು, ಎಚ್ ವಿನೋದ್ ನಿರ್ದೇಶಿಸಿದ್ದಾರೆ. ಪೂಜಾ ಹೆಗ್ಡೆ ನಾಯಕಿಯಾಗಿದ್ದು, ಬಾಬಿ ಡಿಯೋಲ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅನಿರುದ್ಧ್ ರವಿಚಂದ್ರನ್ ಸಂಗೀತ ನಿರ್ದೇಶನ ಮಾಡಿದ್ದಾರೆ.



