ಬಿಜೆಪಿ ಮುಖಂಡ ಎಸಿಬಿ ಖೆಡ್ಡಾಗೆ ಬಿದ್ದಿದ್ದು ಹೇಗೆ?; ಡಿಎಚ್‌ಒ ಕಚೇರಿಯೇ ಮಾಸ್ಟರ್ ಹೆಡ್!

Vijayasakshi (Gadag News) :

ನಾಲ್ಕು ಗಂಟೆ ವಿಚಾರಣೆ ನಡೆಸಿ ಬಂಧಿಸಿದ ಎಸಿಬಿ ಅಧಿಕಾರಿಗಳು

ವಿಜಯಸಾಕ್ಷಿ ಸುದ್ದಿ, ಗದಗ:

ದೇಶದಲ್ಲಿ ನಿರುದ್ಯೋಗ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಯುವ ಜನತೆಗೆ ಆಸೆ, ಆಮಿಷವೊಡ್ಡುವವರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಸರ್ಕಾರಿ ಕೆಲಸ ಮಂಜೂರು ಮಾಡಿಸುತ್ತೇನೆ, ಸರ್ಕಾರಿ ಕೆಲಸ ಕೊಡಿಸುತ್ತೇನೆ ಎಂದು ಉದ್ಯೋಗಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಾ ಕುಳಿತಿರುವವರ ಬಳಿ ಹಣ ವಸೂಲಿ ಮಾಡುವವರ ಮೇಲೆ ಎಸಿಬಿ ಪೊಲೀಸರು ಹದ್ದಿನ ಕಣ್ಣಿರಿಸಿದ್ದಾರೆ.

ಹೌದು, ಗದಗನ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಪೊಲೀಸರು ಇದೆ ಮೊದಲ ಬಾರಿಗೆ ಖಾಸಗಿ ವ್ಯಕ್ತಿಯ ಮೇಲೆ ದಾಳಿ ನಡೆಸುವ ಮೂಲಕ ಬಿಸಿ ಮುಟ್ಟಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸಿಂಗ್ ಹುದ್ದೆ ಕೊಡೆಸುತ್ತೇನೆಂದು ಮಹಿಳೆಯೊಬ್ಬರಿಂದ ಹಣ ಪಡೆಯುತ್ತಿದ್ದ ವೇಳೆ ಜಿಲ್ಲಾ ಬಿಜೆಪಿ ಯುವ ಮುಖಂಡನೊಬ್ಬ ಎಸಿಬಿ ಬಲೆಗೆ ಬಿದ್ದಿದ್ದಾನೆ.

ಬುಧವಾರ ಗದಗನ ಜಿಲ್ಲಾಧಿಕಾರಿಗಳ ಕಚೇರಿ ಎದುರಿಗಿರುವ ರಾಯಲ್ ವಿಲ್ಲಾ ಹೋಟೆಲ್‌ನಲ್ಲಿ ಹಣ ತೆಗೆದುಕೊಳ್ಳುತ್ತಿದ್ದಾಗ ಎಸಿಬಿ ಪೊಲೀಸರ ಕೈಯಲ್ಲಿ ತಗಲು ಹಾಕಿಕೊಂಡಿದ್ದಾನೆ. ಬಿಜೆಪಿ ಯುವ ಮುಖಂಡ ರಮೇಶ್ ಸಜ್ಜಗಾರ ಎಂಬಾತ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಗದಗನ ಜಿಲ್ಲೆಯ ಮುಂಡರಗಿ ಅಥವಾ ಡಂಬಳದ ಸರ್ಕಾರಿ ಆಸ್ಪತ್ರೆಯಲ್ಲಿ ಅರೆಕಾಲಿಕ ನರ್ಸಿಂಗ್ ಹುದ್ದೆ ಕೊಡಿಸುತ್ತೇನೆ ಅಂತಾ ಡಂಬಳದ ಈರಯ್ಯ ಕರವೀರಮಠ ಎಂಬುವವರ ಪತ್ನಿಗೆ ಒಂದು ಲಕ್ಷ ರೂ. ಬೇಡಿಕೆ ಇಟ್ಟಿದ್ದನಂತೆ. ಅದರಲ್ಲಿ ಹೊಟೇಲ್ ರಾಯಲ್ ವಿಲ್ಲಾದಲ್ಲಿ 90 ಸಾವಿರ ರೂ. ಪಡೆದುಕೊಳ್ಳುತ್ತಿದ್ದಾಗ ಎಸಿಬಿ ಪೊಲೀಸರು ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ.

ಭ್ರಷ್ಟಾಚಾರ ನಿಗ್ರಹ ದಳದ ಎಸ್‌ಪಿ ಬಿ.ಎಸ್.ನ್ಯಾಮಗೌಡ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿಗಳಾದ ಎಂ.ವಿ.ಮಲ್ಲಾಪೂರ, ಸುರೇಶ್ ರೆಡ್ಡಿ ಅವರ ನೇತೃತ್ವದಲ್ಲಿ ಗದಗ ಎಸಿಬಿ ಇನ್ಸ್‌ಪೆಕ್ಟರ್‌ಗಳಾದ ಆರ್.ಎಫ್.ದೇಸಾಯಿ, ವೀರಣ್ಣ ಹಳ್ಳಿ, ಸಿಬ್ಬಂದಿಗಳಾದ ಎಂ.ಎಂ.ಅಯ್ಯನಗೌಡ್ರ, ವೀರೇಶ್ ಜೋಳದ, ನಾರಾಯಣ ತಾಯಣ್ಣವರ್, ವೀರಣ್ಣ ಜಾಲಿಹಾಳ, ಶರೀಫ್ ಮುಲ್ಲಾ, ಮಂಜುನಾಥ್ ಮುಳಗುಂದ, ವೀರೇಶ್ ಬಿಸನಳ್ಳಿ, ನಾರಾಯಣರಡ್ಡಿ ವೆಂಕರಡ್ಡಿ ಹಾಗೂ ತಾರಪ್ಪ ಈ ಕಾರ್ಯಾಚರಣೆಯಲ್ಲಿದ್ದರು.

2018ರ ತಿದ್ದುಪಡಿ ಪ್ರಕಾರ ಖಾಸಗಿ ವ್ಯಕ್ತಿಗಳ ಮೇಲೆ ದಾಳಿ ಮಾಡಲು ಅವಕಾಶ ನೀಡಲಾಗಿದೆ. ಹೀಗಾಗಿ ಸರ್ಕಾರಿ ಕೆಲಸ ಕೊಡಿಸುತ್ತೇವೆಂದು ಆಮಿಷ, ಶಿಫಾರಸ್ಸು ಮಾಡುವವರ ಮೇಲೆ ದಾಳಿ ಮಾಡಬಹುದಾಗಿದೆ.

ಬಿ.ಎಸ್.ನ್ಯಾಮಗೌಡ, ಎಸ್‌ಪಿ, ಎಸಿಬಿ

ಬಿಜೆಪಿ ಮುಖಂಡ ಎಸಿಬಿ ಖೆಡ್ಡಾಗೆ ಬಿದ್ದಿದ್ದು ಹೇಗೆ?

ಜಿಲ್ಲೆಯ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿಯಿರುವ ನರ್ಸಿಂಗ್ ಹುದ್ದೆಗಳಿಗೆ ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳನ್ನೇ ಗುರಿಯಾಗಿಸಿಕೊಂಡು ಜಿಲ್ಲಾ ಆರೋಗ್ಯ ಇಲಾಖೆಯ ಕಚೇರಿಯ ಕೆಲ ಅಧಿಕಾರಿ, ಸಿಬ್ಬಂದಿಗಳು ಹಾಗೂ ಬಿಜೆಪಿ ಯುವ ಮುಖಂಡನೊಂದಿಗೆ ಸೇರಿ ಹಣ ಲೂಟಿ ಮಾಡುವ ಸಂಚು ರೂಪಿಸಿದ್ದರು ಎನ್ನಲಾಗಿದೆ. ೩೧ ಅಭ್ಯರ್ಥಿಗಳಲ್ಲಿ ಈಗಾಗಲೇ ಹಲವರು ರಮೇಶ್ ಸಜ್ಜಗಾರನಿಗೆ ಹಣ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಅದರಲ್ಲಿ ಆಯ್ಕೆಗೊಂಡಿದ್ದ ಮಹಿಳೆಯ ಪತಿ ಈರಯ್ಯ ಕರವೀರಮಠ ಸಂಶಯಗೊಂಡು ರಮೇಶನನ್ನು, ನೌಕರಿ ಹಾಗೂ ಹಣ ಕೊಟ್ಟ ಬಗ್ಗೆ ಗ್ಯಾರಂಟಿ ಏನೆಂದು ಪ್ರಶ್ನಿಸಿದಾಗ ಎನ್‌ಎಚ್‌ಎಂ ಅಧಿಕಾರಿ ಗದಿಗೆಣ್ಣವರಿಗೆ ಕರೆ ಮಾಡಿ ರಮೇಶ್ ಖಚಿತಪಡಿಸಿದನು ಎನ್ನಲಾಗಿದೆ. ಆದರೂ, ಇವರನ್ನೆಲ್ಲಾ ಹೆಡೆಮುರಿ ಕಟ್ಟಲು ಈರಯ್ಯ ಎಸಿಬಿ ಮೊರೆ ಹೋಗಿದ್ದ ಎಂದು ಮೂಲಗಳು ತಿಳಿಸಿವೆ.

ಡಿಎಚ್‌ಒ ಕಚೇರಿ ಭ್ರಷ್ಟರ ಕೂಪ?

ಕಳೆದ ಸೆಪ್ಟಂಬರ್ ತಿಂಗಳಲ್ಲಿ ಅವಧಿ ಮುಗಿದಿದ್ದ ‘ಡಿ ಗ್ರುಪ್ ನೌಕರರ ಗುತ್ತಿಗೆ ಅವಧಿಯನ್ನು ಮುಂದುವರೆಸಲು ಲಂಚ ಪಡೆಯುತ್ತಿದ್ದ ಕಚೇರಿ ಅಧೀಕ್ಷಕ ಶಿವಾನಂದ ಸಿಂದೋಗಿಯನ್ನು ಎಸಿಬಿ ಅಧಿಕಾರಿಗಳು ಲಂಚ ಪಡೆಯುತ್ತಿರುವಾಗಲೇ ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದರು. ಈಗ ಮತ್ತೆ ಅರ್ಹತೆಯಿಂದ ಅಂತಿಮವಾಗಿ ನರ್ಸಿಂಗ್ ಹುದ್ದೆಗೆ ಆಯ್ಕೆ ಆದವರಿಂದಲೇ ಹಣ ವಸೂಲಿ ಮಾಡುವ ದಂಧೆಗೆ ಇದೇ ಇಲಾಖೆಯ ಕೆಲ ಅಧಿಕಾರಿಗಳು, ಸಿಬ್ಬಂದಿ ಇಳಿದಿದ್ದಾರೆ ಎನ್ನಲಾಗಿದೆ. ಈ ದಂಧೆಯಲ್ಲಿ ಇರುವವರು ಯಾರು ಎಂಬುವುದು ಎಸಿಬಿ ಅಧಿಕಾರಿಗಳ ತನಿಖೆಯಿಂದ ಸತ್ಯಾಂಶ ಹೊರ ಬರಬೇಕಿದೆ.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ