ಬೆಂಗಳೂರು: ಕೆಂಗೇರಿ ಸಮೀಪದ ನಾಗದೇವನಹಳ್ಳಿಯ ಚಿತ್ರಕೂಟ ಕೌಶಲ್ಯ ಶಾಲೆಯಲ್ಲಿ ತರಗತಿಗಳು ನಡೆಯುತ್ತಿದ್ದ ವೇಳೆಯೇ ಅಗ್ನಿ ಅವಘಡ ಸಂಭವಿಸಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಶಾಲಾ ಕಟ್ಟಡದ ಮೂರನೇ ಮತ್ತು ನಾಲ್ಕನೇ ಮಹಡಿಯಲ್ಲಿ ಕಾಣಿಸಿಕೊಂಡ ಬೆಂಕಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರಲ್ಲಿ ಭೀತಿ ಮೂಡಿಸಿತು.
ಮಾಹಿತಿಯ ಪ್ರಕಾರ, ಇಂದು ಬೆಳಗ್ಗೆ 9 ಗಂಟೆಗೆ ಶಾಲೆ ಎಂದಿನಂತೆ ಆರಂಭವಾಗಿತ್ತು. ಸುಮಾರು 10:15ರ ವೇಳೆಗೆ ನಾಲ್ಕನೇ ಮಹಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆ ಬಳಿಕ ಮೂರನೇ ಮಹಡಿಗೂ ವ್ಯಾಪಿಸಿದೆ.
ಪರಿಸ್ಥಿತಿಯ ಗಂಭೀರತೆ ಅರಿತ ಶಾಲಾ ಸಿಬ್ಬಂದಿ ಮತ್ತು ಶಿಕ್ಷಕರು ತಕ್ಷಣ ಎಲ್ಲಾ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಹೊರಗೆ ಸ್ಥಳಾಂತರಿಸಿದ್ದಾರೆ. ಶಾಲೆಯಲ್ಲಿ ಸುಮಾರು 2 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಸಮಯೋಚಿತ ಕ್ರಮದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ನಾಲ್ಕು ವಾಹನಗಳು ಹಾಗೂ ಕೆಂಗೇರಿ ಪೊಲೀಸರು ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಘಟನೆ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.



