ವಿಜಯಪುರ: ಜಿಲ್ಲೆಯ ಭೀಮಾತೀರ ಪ್ರದೇಶವನ್ನು ಬೆಚ್ಚಿಬೀಳಿಸಿದ್ದ 6 ಮಂದಿಯ ಸಾಮೂಹಿಕ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹತ್ವದ ಕ್ರಮ ಕೈಗೊಂಡಿದ್ದು, 12 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಇಂದು ಇಂಡಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಚಡಚಣ ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಮೇ 29ರಂದು ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದ ಜಮೀನೊಂದರಲ್ಲಿ ನಡೆದ ಭೀಕರ ಹತ್ಯಾಕಾಂಡ ರಾಜ್ಯದಾದ್ಯಂತ ಸಂಚಲನ ಮೂಡಿಸಿತ್ತು. ಡಬಲ್ ಬ್ಯಾರಲ್ ಗನ್‌ನಿಂದ ಗುಂಡು ಹಾರಿಸಿ, ಬಳಿಕ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಆರು ಮಂದಿಯನ್ನು ಕ್ರೂರವಾಗಿ ಹತ್ಯೆ ಮಾಡಲಾಗಿತ್ತು.
ಘಟನೆಯಲ್ಲಿ ಚಡಚಣದ ಪ್ರತಿಷ್ಠಿತ ನಿರಾಳೆ ಕುಟುಂಬದ ಐವರು ಸದಸ್ಯರು ಹಾಗೂ ಅವರೊಂದಿಗೆ ಬಂದಿದ್ದ ಮತ್ತೋರ್ವ ವ್ಯಕ್ತಿ ಮೃತಪಟ್ಟಿದ್ದರು. ದುಂಡಪ್ಪ ನಿರಾಳೆ (65), ಶಿವಪುತ್ರ ನಿರಾಳೆ (58), ಚಂದ್ರಕಾಂತ ನಿರಾಳೆ (55), ರಾಹುಲ್ ನಿರಾಳೆ (25), ಸಮರ್ಥ ನಿರಾಳೆ (23) ಮತ್ತು ಶಬ್ಬೀರ್ ಅತ್ತಾರ್ (45) ಮೃತರು.
ಈ ಕೃತ್ಯವನ್ನು ಗೋವಿಂದಪುರ ಗ್ರಾಮದ ಅಪ್ಪುಗೌಡ ಪಾಟೀಲ್ ಕುಟುಂಬದ ಸದಸ್ಯರು ನಡೆಸಿದ್ದಾರೆ ಎಂದು ಆರೋಪಿಸಿ ನಿರಾಳೆ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಈಗಾಗಲೇ 12 ಮಂದಿಯನ್ನು ಬಂಧಿಸಿದ್ದು, ಹತ್ಯೆಯ ಹಿಂದಿನ ನಿಖರ ಕಾರಣ ಮತ್ತು ಸಂಚಿನ ಕುರಿತು ಹೆಚ್ಚಿನ ವಿಚಾರಣೆ ಮುಂದುವರಿದಿದೆ.



