
ವಿಜಯಸಾಕ್ಷಿ ಸುದ್ದಿ,
ಕೊಪ್ಪಳ: ಮಠಾಧೀಶರೆಂದರೆ ಪೀಠದ ಮೇಲೆ ಕುಳಿತು ಆಶೀರ್ವದಿಸುವವರು ಎಂಬ ನೋಟ ಕಣ್ಮುಂದೆ ಬರುತ್ತದೆ. ಆದರೆ ಕೊಪ್ಪಳದ ಸಂಸ್ಥಾನ ಶ್ರೀ ಗವಿಮಠದ ಗವಿಶ್ರೀಗಳು ಮಾತ್ರ ವಿಭಿನ್ನ. ಸದಾ ಕಾಯಕಯೋಗಿ, ಜನಸಾಮಾನ್ಯರ ಜೊತೆ ಸಾಮಾನ್ಯ ವ್ಯಕ್ತಿಯಂತೆ ಬೆರೆಯುವ ಅವರ ಸ್ವಭಾವವೇ ಎಲ್ಲರಿಗೂ ಮಾದರಿ. ಯಾವುದೇ ಕೆಲಸವಿದ್ದರೂ ಹೇಳುವುದಕ್ಕಿಂತ ಮಾಡುವುದು ಉತ್ತಮ ಎಂಬ ನಿಲುವಿನವರು. ಕಸ ಹೊಡೆಯುವುದು, ಲಟ್ಟಣಿಗೆಯಲ್ಲಿ ಚಪಾತಿ ಲಟ್ಟಿಸುವುದನ್ನು, ತೆಪ್ಪ ನಡೆಸುವುದನ್ನು ಈಗಾಗಲೇ ಕಂಡಿದ್ದೇವೆ.
ಈಗ ಜಾತ್ರೆಯ ನಿಮಿತ್ತ ಶ್ರೀಮಠದ ಅನ್ನದಾಸೋಹಕ್ಕೆ ಭಕ್ತರು ನೀಡಿದ ಅಕ್ಕಿಮೂಟೆಗಳನ್ನು ಹೊತ್ತು ಭಕ್ತರ ಸೇವೆ ಮಾಡುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ಅನ್ನದಾಸೋಹಕ್ಕಾಗಿ ವಾಹನದಲ್ಲಿ ಬಂದ ಅಕ್ಕಿ ಮೂಟೆಗಳನ್ನು ಇಳಿಸಿಕೊಂಡು ಕೂಲಿ ಕೆಲಸಗಾರರಂತೆ ಹೊತ್ತು ಒಂದೆಡೆ ಸಾಗಿಸುವ ಮೂಲಕ ಇತರರಿಗೆ ಶ್ರೀಗಳು ಪ್ರೇರಣೆಯಾಗಿದ್ದಾರೆ.



