ಬೆಂಗಳೂರು: ನಗರದಲ್ಲಿ ರಾಜ್ಯಪಾಲರ ವಿಐಪಿ ಸಂಚಾರದ ವೇಳೆ ಟ್ರಾಫಿಕ್ ತಡೆದ ಕಾರಣ ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಅಡ್ಡಿಯಾಗಿದೆ ಎಂದು ಆರೋಪಿಸಿ ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದ ಯುವಕನ ಪ್ರಕರಣ ಇದೀಗ ಸಂಪೂರ್ಣ ಹೊಸ ತಿರುವು ಪಡೆದುಕೊಂಡಿದೆ.
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಎಚ್ಎಎಲ್ (HAL) ಠಾಣೆ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಪ್ರತಿಭಟನೆ ನಡೆಸಿದ್ದ ಮೋಹಿತ್ ಎಂಬ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲೇ ಘಟನೆ ಕುರಿತು ಹೇಳಲಾಗಿದ್ದ ‘ಗರ್ಭಿಣಿ ಪತ್ನಿ’ ವಿಚಾರವೇ ಸುಳ್ಳು ಎಂದು ಪೊಲೀಸರು ದೃಢಪಡಿಸಿದ್ದಾರೆ.
ವಿಚಾರಣೆ ವೇಳೆ ಮೋಹಿತ್ ನೀಡಿದ ಹೇಳಿಕೆಯ ಪ್ರಕಾರ, ಘಟನೆ ನಡೆದ ಸಮಯದಲ್ಲಿ ಆತ ಕಾರಿನಲ್ಲಿ ಒಬ್ಬನೇ ಪ್ರಯಾಣಿಸುತ್ತಿದ್ದ. ವಿಐಪಿ ಮೂವ್ಮೆಂಟ್ ಹಿನ್ನೆಲೆಯಲ್ಲಿ ಇಸ್ರೋ ಜಂಕ್ಷನ್ನಲ್ಲಿ ಸುಮಾರು 15 ನಿಮಿಷ ಟ್ರಾಫಿಕ್ನಲ್ಲಿ ಸಿಲುಕಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ.
ಟ್ರಾಫಿಕ್ ವಿಳಂಬದಿಂದ ಕೋಪಗೊಂಡು ತುರ್ತು ಪರಿಸ್ಥಿತಿ ಇದೆ ಎಂಬಂತೆ ತೋರಿಸಲು ತಾನು ಪತ್ನಿ ಗರ್ಭಿಣಿ ಎಂದು ಸುಳ್ಳು ಹೇಳಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾಗಿ ಆತ ಸ್ಪಷ್ಟಪಡಿಸಿದ್ದಾನೆ. ಪೊಲೀಸರ ವಿರುದ್ಧ ಯಾವುದೇ ವೈಯಕ್ತಿಕ ದ್ವೇಷ ಅಥವಾ ಉದ್ದೇಶ ಇರಲಿಲ್ಲವೆಂದು ಸಹ ಆತ ಹೇಳಿಕೆ ನೀಡಿದ್ದಾನೆ.
ಸದ್ಯಕ್ಕೆ ಮೋಹಿತ್ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಿಸಿಲ್ಲ. ಪೊಲೀಸರು ಆತನಿಂದ ಲಿಖಿತ ಹೇಳಿಕೆ ಪಡೆದು ಕಠಿಣ ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ. ಸಾರ್ವಜನಿಕರು ಇಂತಹ ಘಟನೆಗಳಲ್ಲಿ ದೃಢೀಕರಿಸದ ಮಾಹಿತಿಯನ್ನು ನಂಬಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ.



