ಬೆಂಗಳೂರು:- ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವರು ಇಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಬೆಂಗಳೂರಿನ ಲೋಕಭವನದ ಗಾಜಿನ ಮನೆಯಲ್ಲಿ ನಡೆಯಲಿರುವ ಪದಗ್ರಹಣ ಸಮಾರಂಭಕ್ಕೆ ಭರ್ಜರಿ ಸಿದ್ಧತೆಗಳನ್ನು ಮಾಡಲಾಗಿದೆ. ವೇದಿಕೆಯಲ್ಲಿ ಸೀಮಿತ ಗಣ್ಯರಿಗೆ 20 ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಸರ್ವಧರ್ಮ ಸಮನ್ವಯತೆಯ ಪ್ರತೀಕವಾಗಿ ಸ್ವಾಮೀಜಿಗಳು, ಫಾದರ್ಗಳು ಹಾಗೂ ಮೌಲ್ವಿಗಳು ಸೇರಿದಂತೆ ಸುಮಾರು 55 ಧಾರ್ಮಿಕ ಮುಖಂಡರಿಗೆ ಆಹ್ವಾನ ನೀಡಲಾಗಿದೆ.
ಸಮಾರಂಭದಲ್ಲಿ ಡಿ.ಕೆ. ಶಿವಕುಮಾರ್ ಜೊತೆಗೆ ಸುಮಾರು 10ಕ್ಕೂ ಹೆಚ್ಚು ಸಚಿವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಸಚಿವ ಸಂಪುಟ ಪಟ್ಟಿ ಅಂತಿಮಗೊಳಿಸುವ ಪ್ರಕ್ರಿಯೆ ಕೊನೆಯ ಹಂತದಲ್ಲಿದ್ದು, ದೆಹಲಿ ಮತ್ತು ಬೆಂಗಳೂರು ಮಟ್ಟದಲ್ಲಿ ನಡೆದ ಸರಣಿ ಸಭೆಗಳ ಬಳಿಕ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ.
ಕಾಂಗ್ರೆಸ್ ಹೈಕಮಾಂಡ್ ನಾಯಕರು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಸೇರಿದಂತೆ ಹಲವು ನಾಯಕರು ಕಾರ್ಯಕ್ರಮಕ್ಕೆ ಆಹ್ವಾನಿತರಾಗಿದ್ದಾರೆ.
ರಾಜಕೀಯ ಅನುಭವ, ದೀರ್ಘ ಹೋರಾಟದ ಹಿನ್ನೆಲೆ ಹಾಗೂ ಪಕ್ಷ ಸಂಘಟನೆಯಲ್ಲಿ ನೀಡಿದ ಕೊಡುಗೆಯ ಹಿನ್ನೆಲೆಯಲ್ಲಿ ಡಿಕೆಶಿಯವರ ಪದಗ್ರಹಣವನ್ನು ರಾಜ್ಯ ರಾಜಕೀಯದಲ್ಲಿ ಹೊಸ ಅಧ್ಯಾಯವೆಂದು ಪರಿಗಣಿಸಲಾಗುತ್ತಿದೆ. ಸಚಿವ ಸಂಪುಟ ಹಂಚಿಕೆ ಕುರಿತು ಅಂತಿಮ ಘಟ್ಟದ ಚರ್ಚೆಗಳು ಮುಂದುವರಿದಿದ್ದು, ಇಂದು ಮಧ್ಯಾಹ್ನದೊಳಗೆ ಅಧಿಕೃತ ಘೋಷಣೆ ಸಾಧ್ಯತೆ ಇದೆ.



