ಬೆಂಗಳೂರು: ನೂತನ ಮುಖ್ಯಮಂತ್ರಿ ಆಗಿ ಡಿಕೆ ಶಿವಕುಮಾರ್ ಇಂದು ಸಂಜೆ ಲೋಕಭವನದ ಗ್ಲಾಸ್ ಹೌಸ್‌ನಲ್ಲಿ ಪ್ರಮಾಣವಚನ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಭದ್ರತೆ ಹಾಗೂ ಸಂಚಾರ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ.
ಪೊಲೀಸ್ ಅಧಿಕಾರಿಗಳ ಮಾಹಿತಿಯಂತೆ, ಇಂದು ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ನಗರ ಕೇಂದ್ರ ಭಾಗದ ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ವಿಧಿಸಲಾಗಿದೆ. ಕಬ್ಬನ್ ರಸ್ತೆ, ಕ್ವೀನ್ಸ್ ರಸ್ತೆ, ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ, ರೇಸ್ ಕೋರ್ಸ್ ರಸ್ತೆ ಸೇರಿದಂತೆ ಹಲವು ಪ್ರಮುಖ ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಇರಲಿದೆ.
ಸಂಚಾರ ದಟ್ಟಣೆ ತಪ್ಪಿಸಲು ಶಿವಾಜಿನಗರ, ಕನ್ನಿಂಗ್ಹ್ಯಾಮ್ ರಸ್ತೆ, ನೃಪತುಂಗ ರಸ್ತೆ, ಶಿವಾನಂದ ವೃತ್ತ, ಹೆಬ್ಬಾಳ ಹಾಗೂ ಔಟರ್ ರಿಂಗ್ ರಸ್ತೆ ಮಾರ್ಗಗಳನ್ನು ಬಳಸುವಂತೆ ಟ್ರಾಫಿಕ್ ಪೊಲೀಸರು ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ.
ಭಾರಿ ವಾಹನಗಳ ಸಂಚಾರವನ್ನು ಇಂದು ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆಗೂ ನಿರ್ಬಂಧ ವಿಧಿಸಲಾಗಿದೆ.
ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರ ನೇತೃತ್ವದಲ್ಲಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದ್ದು, ವಿವಿಐಪಿ, ಗಣ್ಯರು ಹಾಗೂ ಸಾರ್ವಜನಿಕರಿಗಾಗಿ ಪ್ರತ್ಯೇಕ ಬಂದೋಬಸ್ತ್ ರೂಪಿಸಲಾಗಿದೆ. ಲೋಕಭವನದ ಬಳಿ ನಿಯಂತ್ರಿತ ಪ್ರವೇಶ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಪಾಸ್ ಇರುವವರಿಗೆ ಮಾತ್ರ ಒಳ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.
ಕಾರ್ಯಕ್ರಮ ಹಿನ್ನೆಲೆಯಲ್ಲಿ ನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.



