HomeKarnataka Newsವಾಲ್ಮೀಕಿ ನಿಗಮ ಹಗರಣ: ಬಿ. ನಾಗೇಂದ್ರ ಸೇರಿ 30 ಮಂದಿಯ ವಿರುದ್ಧ ಸಿಬಿಐ ಚಾರ್ಜ್ ಶೀಟ್...

ವಾಲ್ಮೀಕಿ ನಿಗಮ ಹಗರಣ: ಬಿ. ನಾಗೇಂದ್ರ ಸೇರಿ 30 ಮಂದಿಯ ವಿರುದ್ಧ ಸಿಬಿಐ ಚಾರ್ಜ್ ಶೀಟ್ ಸಲ್ಲಿಕೆ

For Dai;y Updates Join Our whatsapp Group

Spread the love

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬಹುಕೋಟಿ ರೂಪಾಯಿ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (ಸಿಬಿಐ) ಮಾಜಿ ಸಚಿವ ಬಿ. ನಾಗೇಂದ್ರ ಸೇರಿದಂತೆ 30 ಆರೋಪಿಗಳ ವಿರುದ್ಧ ವಿಶೇಷ ನ್ಯಾಯಾಲಯಕ್ಕೆ ಬೃಹತ್ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದೆ.

ನಿಗಮದ ಹಣದ ಅಕ್ರಮ ವರ್ಗಾವಣೆಯಲ್ಲಿ ಮಾಜಿ ಸಚಿವರ ಕುಟುಂಬಸ್ಥರು ಹಾಗೂ ಆಪ್ತರ ಪಾತ್ರವಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಸಿಬಿಐ ತಿಳಿಸಿದೆ. ವಾಲ್ಮೀಕಿ ನಿಗಮ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆಯಲ್ಲಿ ನಡೆದಿರುವ ಆರ್ಥಿಕ ಅಕ್ರಮಗಳ ತನಿಖೆಯನ್ನು ಪೂರ್ಣಗೊಳಿಸಿರುವ ಸಿಬಿಐ, ಮೂರು ಪ್ರಕರಣಗಳಲ್ಲೂ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಪ್ರಮುಖ ಆರೋಪಿಯನ್ನಾಗಿ ಹೆಸರಿಸಿದೆ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎಂ.ಜಿ. ರಸ್ತೆ ಶಾಖೆಯ ಅಧಿಕಾರಿಗಳ ವಿರುದ್ಧ ದಾಖಲಾಗಿದ್ದ ದೂರಿನ ಆಧಾರದ ಮೇಲೆ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ಆರಂಭಗೊಂಡಿತ್ತು. ಬಳಿಕ ನ್ಯಾಯಾಲಯದ ನಿರ್ದೇಶನದಂತೆ ತನಿಖೆಯನ್ನು ಇಲಾಖೆಯ ಇತರೆ ಘಟಕಗಳಿಗೂ ವಿಸ್ತರಿಸಲಾಗಿತ್ತು.

ಸಿಬಿಐ ತನಿಖೆಯ ಪ್ರಕಾರ, ಮಾಜಿ ಸಚಿವ ಬಿ. ನಾಗೇಂದ್ರ, ಅವರ ಆಪ್ತ ನೆಕ್ಕಂಟಿ ನಾಗರಾಜ್ ಹಾಗೂ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ ಅವರು ಸೇರಿ ಅಕ್ರಮ ಹಣ ವರ್ಗಾವಣೆಗೆ ಸಂಚು ರೂಪಿಸಿದ್ದರು.

ಹೈದರಾಬಾದ್ ಮೂಲದ ಸತ್ಯನಾರಾಯಣ ವರ್ಮಾ ಎಂಬಾತ ನಕಲಿ ದಾಖಲೆಗಳನ್ನು ಬಳಸಿಕೊಂಡು 18 ಬೋಗಸ್ ಬ್ಯಾಂಕ್ ಖಾತೆಗಳನ್ನು ತೆರೆದಿದ್ದ. ನಿಗಮದ ಎಂಡಿ ಮತ್ತು ಅಕೌಂಟ್ಸ್ ಅಧಿಕಾರಿಗಳ ನಕಲಿ ಸಹಿ ಹಾಗೂ ರಬ್ಬರ್ ಸ್ಟಾಂಪ್‌ಗಳನ್ನು ಬಳಸಿ, ನಿಗಮದ ಖಾತೆಯಲ್ಲಿದ್ದ 187 ಕೋಟಿ ರೂಪಾಯಿ ಪೈಕಿ 89.63 ಕೋಟಿ ರೂಪಾಯಿಯನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ಆರೋಪಿಸಲಾಗಿದೆ.

ಈ ಹಣವನ್ನು ಸುಮಾರು 600 ಬ್ಯಾಂಕ್ ಖಾತೆಗಳ ಮೂಲಕ ವರ್ಗಾಯಿಸಿ, ಬಳಿಕ ನಗದು, ಚಿನ್ನ ಹಾಗೂ ಐಷಾರಾಮಿ ಬೆನಾಮಿ ವಾಹನಗಳ ರೂಪದಲ್ಲಿ ಪರಿವರ್ತಿಸಲಾಗಿದೆ ಎಂದು ಸಿಬಿಐ ಹೇಳಿದೆ. ಈ ಅಕ್ರಮಕ್ಕೆ ಕೆಲವು ಬ್ಯಾಂಕ್ ಅಧಿಕಾರಿಗಳ ಸಹಕಾರವೂ ದೊರೆತಿತ್ತು ಎಂಬ ಆರೋಪವೂ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ.

ಸ್ಮಾರ್ಟ್ ಕಂಪ್ಯೂಟರ್ ಲ್ಯಾಬ್ ಮತ್ತು ರೊಟ್ಟಿ ತಯಾರಿಕಾ ಯಂತ್ರಗಳ ಖರೀದಿಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆಯಲ್ಲಿ ನೆಕ್ಕಂಟಿ ನಾಗರಾಜ್ ಅವರ ಆಪ್ತರಿಗೆ ಸೇರಿದ ಸಂಸ್ಥೆಗೆ 13.95 ಕೋಟಿ ರೂಪಾಯಿ ಮೌಲ್ಯದ ಗುತ್ತಿಗೆ ನೀಡಲಾಗಿತ್ತು ಎಂದು ಸಿಬಿಐ ಆರೋಪಿಸಿದೆ.

ಈ ವ್ಯವಹಾರದ ಪ್ರತಿಫಲವಾಗಿ ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ತಲುಪಿದ ಎಂದು ಹೇಳಲಾಗಿರುವ 1.20 ಕೋಟಿ ರೂಪಾಯಿ ಅಕ್ರಮ ಹಣವನ್ನು ಅವರ ಸಹೋದರಿ, ಭಾವ, ವೈಯಕ್ತಿಕ ಸಹಾಯಕ (ಪಿಎ) ಹಾಗೂ ಬಳ್ಳಾರಿಯಲ್ಲಿರುವ ಫಾರ್ಮ್‌ಹೌಸ್ ಮಾಲೀಕರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ತನಿಖೆಯಲ್ಲಿ ಪತ್ತೆಯಾಗಿದೆ.

ಕೌಶಲಾಭಿವೃದ್ಧಿ ತರಬೇತಿ ಕಾರ್ಯಕ್ರಮಕ್ಕೆ ಸಂಬಂಧಿಸಿದ 4.90 ಕೋಟಿ ರೂಪಾಯಿ ಕಾಮಗಾರಿಯಲ್ಲಿ ನಿಯಮಬಾಹಿರವಾಗಿ ಉಪಗುತ್ತಿಗೆ ನೀಡಲಾಗಿತ್ತು ಎಂದು ಸಿಬಿಐ ತಿಳಿಸಿದೆ.

ಈ ವ್ಯವಹಾರದಲ್ಲಿ ನೆಕ್ಕಂಟಿ ನಾಗರಾಜ್ ಅವರ ಕುಟುಂಬಕ್ಕೆ 64 ಲಕ್ಷ ರೂಪಾಯಿ ಹಾಗೂ ಇಲಾಖೆಯ ಸೆಕ್ಷನ್ ಅಧಿಕಾರಿ ಪ್ರಕಾಶ್ ಅವರಿಗೆ 15.50 ಲಕ್ಷ ರೂಪಾಯಿ ಲಂಚ ರೂಪದಲ್ಲಿ ಪಾವತಿಸಲಾಗಿದೆ ಎಂಬ ಆರೋಪವನ್ನೂ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಚಾರ್ಜ್‌ಶೀಟ್ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ನ್ಯಾಯಾಂಗ ಪ್ರಕ್ರಿಯೆ ಮತ್ತಷ್ಟು ಮಹತ್ವ ಪಡೆದುಕೊಳ್ಳುವ ಸಾಧ್ಯತೆ ಇದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!