ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಸೀಸನ್ 13’ ಆರಂಭಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಕಲರ್ಸ್ ಕನ್ನಡ ವಾಹಿನಿ ಹೊಸ ಪ್ರೋಮೋ ಬಿಡುಗಡೆ ಮಾಡಿ ಮುಂದಿನ ಸೀಸನ್ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಅಧಿಕೃತವಾಗಿ ಘೋಷಿಸಿದೆ.
ಕಳೆದ ಸೀಸನ್‌ನಲ್ಲಿ ಗಿಲ್ಲಿ ನಟ ಟ್ರೋಫಿ ಗೆದ್ದ ನಾಲ್ಕು ತಿಂಗಳಲ್ಲೇ ಹೊಸ ಸೀಸನ್ ಘೋಷಣೆಯಾಗಿರುವುದು ವೀಕ್ಷಕರಲ್ಲಿ ಅಚ್ಚರಿ ಮತ್ತು ಉತ್ಸಾಹ ಮೂಡಿಸಿದೆ. ಸಾಮಾನ್ಯವಾಗಿ ಸೀಸನ್‌ಗಳ ನಡುವೆ ದೀರ್ಘ ಅಂತರವಿರುವುದಾದರೂ, ಈ ಬಾರಿ ಕಾರ್ಯಕ್ರಮವನ್ನು ಬೇಗ ಆರಂಭಿಸಲು ವಾಹಿನಿ ನಿರ್ಧರಿಸಿರುವುದು ವಿಶೇಷವಾಗಿದೆ.
‘ಈ ವರ್ಷ ಬೇಗ ಶುರುವಾಗ್ತಿದೆ ಕನ್ನಡಿಗರ ಹಬ್ಬ’ ಎಂಬ ಸಂದೇಶದೊಂದಿಗೆ ಬಿಡುಗಡೆಯಾದ ಪ್ರೋಮೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರತಿಕ್ರಿಯೆ ಪಡೆಯುತ್ತಿದೆ. ಅಭಿಮಾನಿಗಳು ಹೊಸ ಸೀಸನ್‌ನ ಸ್ಪರ್ಧಿಗಳ ಬಗ್ಗೆ ಈಗಾಗಲೇ ಊಹಾಪೋಹ ಆರಂಭಿಸಿದ್ದಾರೆ.
ವಿಜಯ್ ರಾಘವೇಂದ್ರ, ಅಕುಲ್ ಬಾಲಾಜಿ, ಶ್ರುತಿ, ಪ್ರಥಮ್, ಚಂದನ್ ಶೆಟ್ಟಿ, ಶಶಿಕುಮಾರ್, ಶೈನ್ ಶೆಟ್ಟಿ, ಮಂಜು ಪಾವಗಡ, ರೂಪೇಶ್ ಶೆಟ್ಟಿ, ಕಾರ್ತಿಕ್ ಮಹೇಶ್, ಹನುಮಂತ ಹಾಗೂ ಗಿಲ್ಲಿ ನಟ ಸೇರಿದಂತೆ ಹಲವು ಜನಪ್ರಿಯ ಸ್ಪರ್ಧಿಗಳು ಈ ಹಿಂದೆ ಟ್ರೋಫಿ ಗೆದ್ದಿದ್ದಾರೆ.
ಹೊಸ ಸೀಸನ್‌ನಲ್ಲಿ ಯಾರು ಭಾಗವಹಿಸಲಿದ್ದಾರೆ, ಯಾವ ಹೊಸ ಟ್ವಿಸ್ಟ್‌ಗಳು ಇರಲಿವೆ ಹಾಗೂ ಮುಂದಿನ ಚಾಂಪಿಯನ್ ಯಾರು ಎಂಬುದರ ಬಗ್ಗೆ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಾರ್ಯಕ್ರಮದ ಮುಂದಿನ ಅಧಿಕೃತ ಅಪ್‌ಡೇಟ್‌ಗಾಗಿ ವೀಕ್ಷಕರು ಕಾದಿದ್ದಾರೆ.



