ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿರುವ ಹಿರಿಯ ನಾಯಕ ಎಚ್.ಕೆ. ಪಾಟೀಲ ಅವರಿಗೆ ಸಚಿವ ಸಂಪುಟದ ಎರಡನೇ ಹಂತದ ವಿಸ್ತರಣೆಯಲ್ಲಿ ಸಚಿವ ಸ್ಥಾನ ನೀಡಬೇಕು. ಇಲ್ಲದಿದ್ದರೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಬಿಸ್ಮಿಲ್ಲಾ ಜಮಾತ್ ಮುಖಂಡ ಅಬೂಬುಕರ್ ಅಣ್ಣಿಗೇರಿ ಎಚ್ಚರಿಕೆ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗಕ್ಕೆ ಸಮರ್ಪಕ ಪ್ರಾತಿನಿಧ್ಯ ಸಿಗಬೇಕಾದರೆ ಎಚ್.ಕೆ. ಪಾಟೀಲರಿಗೆ ಸಚಿವ ಸ್ಥಾನ ನೀಡುವುದು ಅನಿವಾರ್ಯ ಎಂದು ಹೇಳಿದರು.
ರಫೀಕ್ ಅಬ್ಬಿಗೇರಿ ಮಾತನಾಡಿ, ಎಚ್.ಕೆ. ಪಾಟೀಲ ಅವರು ಗದಗ ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ತಮ್ಮ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಜನಪರವಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.
ಭಾಷಾ ಮಲ್ಲಸಮುದ್ರ ಮಾತನಾಡಿ, ಎಚ್.ಕೆ. ಪಾಟೀಲ ಅವರು ಈ ಹಿಂದೆ ಹಲವು ಸಚಿವ ಸ್ಥಾನಗಳನ್ನು ಸಮರ್ಥವಾಗಿ ನಿರ್ವಹಿಸಿರುವ ಅನುಭವಿ ನಾಯಕರು. ಉತ್ತರ ಕರ್ನಾಟಕದ ಪ್ರಭಾವಿ ನಾಯಕರಿಗೆ ಸಚಿವ ಸಂಪುಟದಲ್ಲಿ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜಾಖಾನ್ ಪಠಾಣ್, ಸಮೀರ್, ರಾಜಸಾಬ್, ದಾವಲಸಾಬ್ ಮುರಡಿ, ಶರೀಫಸಾಬ್ ನದಾಫ್ ಸೇರಿದಂತೆ ಜಮಾತ್ ಮುಖಂಡರು ಉಪಸ್ಥಿತರಿದ್ದರು.
“ಉತ್ತರ ಕರ್ನಾಟಕದ ಅನುಭವಿಗಳಾದ ನಾಯಕರನ್ನು ಸಚಿವ ಸಂಪುಟದಲ್ಲಿ ಕಡೆಗಣಿಸುವುದು ಸರಿಯಲ್ಲ”
ಅಬೂಬುಕರ್ ಅಣ್ಣಿಗೇರಿ



