ರಾಯಚೂರು: ಜಿಲ್ಲೆಯಾದ್ಯಂತ ಶನಿವಾರ ಬೆಳ್ಳಂಬೆಳಗ್ಗೆಯೇ ಆರಂಭವಾದ ಧಾರಾಕಾರ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಹಲವೆಡೆ ಅವಾಂತರಗಳು ಉಂಟಾಗಿವೆ.
ನಿರಂತರ ಮಳೆಯ ಪರಿಣಾಮ ಹಳ್ಳ–ಕೊಳ್ಳಗಳು ತುಂಬಿ ಹರಿಯುತ್ತಿದ್ದು, ರಾಯಚೂರು ತಾಲೂಕಿನ ಇಡಪನೂರಿನಲ್ಲಿ ಹಳ್ಳದ ನೀರು ಕಿರು ಸೇತುವೆ ಮೇಲೆ ಹರಿದಿದೆ. ಇದರಿಂದ ಮೀರಾಪುರ ಹಾಗೂ ಯರಗೇರಾ ಮಾರ್ಗದ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ತಿಳಿದುಬಂದಿದೆ.
ನಗರದ ಐಡಿಎಸ್‌ಎಂಟಿ ಲೇಔಟ್‌ನಲ್ಲಿ ಅವೈಜ್ಞಾನಿಕ ಚರಂಡಿ ಕಾಮಗಾರಿಯಿಂದಾಗಿ ಮಳೆ ನೀರು ಸರಿಯಾಗಿ ಹರಿಯದೆ ರಸ್ತೆಗಳು ಜಲಾವೃತಗೊಂಡಿವೆ. ವಾಹನ ಸವಾರರು ನೀರಿನಲ್ಲಿ ಸಂಚರಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಇದೇ ವೇಳೆ ಹಳೆ ಆಶ್ರಯ ಕಾಲೋನಿಯಲ್ಲಿ ಸಯ್ಯದಾ ನಸಿಮುನ್ ಅವರ ಮನೆ ಸೇರಿದಂತೆ ಹಲವೆಡೆ ಚರಂಡಿ ಮಿಶ್ರಿತ ಮಳೆನೀರು ಮನೆಗಳಿಗೆ ನುಗ್ಗಿದ್ದು, ನಿವಾಸಿಗಳು ನೀರು ಹೊರಹಾಕಲು ಹರಸಾಹಸ ಪಡುತ್ತಿದ್ದಾರೆ.
ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಶಾಶ್ವತ ಪರಿಹಾರಕ್ಕೆ ಆಗ್ರಹಿಸಿದ್ದಾರೆ.



