ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಇದೀಗ ಸರ್ಕಾರದಿಂದ ಮೇಜರ್ ಪರಿಷ್ಕರಣೆ ಕೈಗೊಳ್ಳಲಾಗಿದೆ.
ಯೋಜನೆಯ ದುರುಪಯೋಗ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಫಲಾನುಭವಿಗಳ ಮರು ಪರಿಶೀಲನೆ ಆರಂಭವಾಗಿದ್ದು, ಅನರ್ಹರನ್ನು ಗುರುತಿಸಿ ಹಣ ವರ್ಗಾವಣೆ ಸ್ಥಗಿತಗೊಳಿಸಲಾಗಿದೆ.
ಸಿಎಂ ಡಿ.ಕೆ. ಶಿವಕುಮಾರ್ ಅವರೇ ಈಗಾಗಲೇ ಫಲಾನುಭವಿಗಳು ಮರು ಅರ್ಜಿ ಸಲ್ಲಿಸಬೇಕೆಂದು ಮಾಹಿತಿ ನೀಡಿದ್ದಾರೆ. ಒಟ್ಟು 1.30 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳ ಪೈಕಿ 3.89 ಲಕ್ಷ ಮಂದಿಯನ್ನು ಅನರ್ಹರೆಂದು ಗುರುತಿಸಲಾಗಿದೆ. ಇದರಲ್ಲಿ ಆದಾಯ ತೆರಿಗೆ ಹಾಗೂ GST ಪಾವತಿದಾರರು ಹಾಗೂ ಮೃತಪಟ್ಟವರ ಹೆಸರಿನಲ್ಲಿ ಹಣ ಪಡೆಯುತ್ತಿದ್ದ ಪ್ರಕರಣಗಳು ಹೆಚ್ಚಾಗಿ ಪತ್ತೆಯಾಗಿವೆ.
ಅಧಿಕಾರಿಗಳ ಮಾಹಿತಿಯ ಪ್ರಕಾರ, 1.94 ಲಕ್ಷ ಐಟಿ/ಜಿಎಸ್‌ಟಿ ಪಾವತಿದಾರರು ಹಾಗೂ 1.95 ಲಕ್ಷ ಮೃತ ಫಲಾನುಭವಿಗಳ ಖಾತೆಗಳಿಗೆ ಹಣ ಜಮೆಯಾಗುತ್ತಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರ ಪಾವತಿಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.
ಅನರ್ಹ ಫಲಾನುಭವಿಗಳ ಪೈಕಿ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿದ್ದು, ನಂತರ ಬೆಳಗಾವಿ, ದಕ್ಷಿಣ ಕನ್ನಡ, ಮೈಸೂರು ಹಾಗೂ ತುಮಕೂರು ಜಿಲ್ಲೆಗಳು ಸ್ಥಾನ ಪಡೆದಿವೆ.
ಜಿಲ್ಲಾವಾರು ವಿವರ (ಮುಖ್ಯಾಂಶ):
- ಬೆಂಗಳೂರು ನಗರ: 47,871
- ಬೆಳಗಾವಿ: 32,282
- ದಕ್ಷಿಣ ಕನ್ನಡ: 16,654
- ಮೈಸೂರು: 20,680
- ತುಮಕೂರು: 20,037
ಮಾರ್ಚ್ ತಿಂಗಳಲ್ಲಿ ನಡೆದ ಪರಿಶೀಲನೆಯಲ್ಲೇ ಈ ಅನರ್ಹರನ್ನು ಗುರುತಿಸಲಾಗಿದ್ದು, ವಿವಿಧ ಸರ್ಕಾರಿ ದತ್ತಾಂಶಗಳನ್ನು ಪರಸ್ಪರ ಹೊಂದಾಣಿಕೆ ಮಾಡಿ ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ.
ಮುಂದಿನ ಹಂತದಲ್ಲಿ ಬಯೋಮೆಟ್ರಿಕ್ ದೃಢೀಕರಣ ವ್ಯವಸ್ಥೆ ಜಾರಿಗೆ ತರಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿದ್ಧತೆ ನಡೆಸಿದೆ. ಇದರಿಂದ ನಕಲಿ ಫಲಾನುಭವಿಗಳನ್ನು ತಡೆಯಲು ಹಾಗೂ ಯೋಜನೆಯ ನಿಖರ ಅನುಷ್ಠಾನಕ್ಕೆ ಸಹಾಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪರಿಷ್ಕರಣೆಯಿಂದ ಸರ್ಕಾರಕ್ಕೆ ಪ್ರತಿ ತಿಂಗಳು ಸುಮಾರು 77 ಕೋಟಿ ರೂ. ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.



