ಮುಂಬೈ: ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಅವರ ಮಾಜಿ ಪತಿ ಮೊಹ್ಸಿನ್ ಅಖ್ತರ್ ಎರಡನೇ ಮದುವೆಯಾಗಿದ್ದಾರೆ.
ಊರ್ಮಿಳಾ ಜೊತೆ ವಿಚ್ಛೇದನ ಪಡೆದು ಎರಡು ವರ್ಷಗಳ ಬಳಿಕ ಮೊಹ್ಸಿನ್ ಇದೀಗ ನಿಧಾ ಭಟ್ ಅವರೊಂದಿಗೆ ವೈವಾಹಿಕ ಜೀವನ ಆರಂಭಿಸಿದ್ದಾರೆ. ತಮ್ಮ ವಿವಾಹದ ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಭಾವನಾತ್ಮಕ ಸಂದೇಶವನ್ನೂ ಪ್ರಕಟಿಸಿದ್ದಾರೆ.
ಪೋಸ್ಟ್‌ನಲ್ಲಿ ಮೊಹ್ಸಿನ್ ಅವರು ಪ್ರೀತಿ, ತಾಳ್ಮೆ, ಕೃತಜ್ಞತೆ ಮತ್ತು ಧಾರ್ಮಿಕ ನಂಬಿಕೆಯ ಕುರಿತು ಮಾತನಾಡಿದ್ದು, ನಿಧಾ ಭಟ್ ತಮ್ಮ ಜೀವನದಲ್ಲಿ ಹೊಸ ಬೆಳಕು ತಂದಿದ್ದಾರೆ ಎಂದು ತಿಳಿಸಿದ್ದಾರೆ. ಜೊತೆಗೆ ತಮ್ಮ ತಾಯಿಗೆ ಧನ್ಯವಾದ ತಿಳಿಸಿ ಕುಟುಂಬದ ಬೆಂಬಲವನ್ನು ಸ್ಮರಿಸಿದ್ದಾರೆ.
ಮೊಹ್ಸಿನ್ ಅಖ್ತರ್ ಮತ್ತು ಊರ್ಮಿಳಾ ಮಾತೋಂಡ್ಕರ್ 2016ರಲ್ಲಿ ವಿವಾಹವಾಗಿದ್ದರು. ವಯಸ್ಸಿನ ಅಂತರ ಮತ್ತು ವಿಭಿನ್ನ ಧರ್ಮ ಹಿನ್ನೆಲೆಯಿಂದಾಗಿ ಇವರ ಮದುವೆ ಆಗಲೇ ಚರ್ಚೆಗೆ ಗ್ರಾಸವಾಗಿತ್ತು. 2024ರಲ್ಲಿ ಇವರ ದಾಂಪತ್ಯದಲ್ಲಿ ಬಿರುಕು ಮೂಡಿ, ನಂತರ ಅಧಿಕೃತವಾಗಿ ವಿಚ್ಛೇದನ ಪ್ರಕ್ರಿಯೆ ಆರಂಭವಾಗಿತ್ತು.
ಇದೀಗ ಮೊಹ್ಸಿನ್ ಅಖ್ತರ್ ಅವರ ಎರಡನೇ ಮದುವೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.



