
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ನಾವು ಈಗಾಗಲೇ ಕಾಂಗ್ರೆಸ್‌ಗೆ ವಿಚ್ಛೇದನ ನೀಡಿದ್ದೇವೆ. ವಿಚ್ಛೇದನಗೊಂಡವರು ಎಂದೂ ಒಂದಾಗಲು ಸಾಧ್ಯವಿಲ್ಲ. ಕಾಂಗ್ರೆಸ್ ಜೊತೆ ನಾವು ಹೋಗಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ಕೊಪ್ಪಳದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ವಿಚ್ಛೇದನ ನೀಡಿ ಬಿಜೆಪಿ ಮನೆಗೆ ಮೊಳೆ ಹೊಡೆದು ಒಳಗೆ ಬಂದಿದ್ದೇವೆ. ಇಲ್ಲಿಯ ಮಕ್ಕಳಾಗಿಯೇ ಉಳಿಯುತ್ತೇವೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರಲ್ಲ ಎಂದು ಸ್ಪಷ್ಟಪಡಿಸಿದರು.
ಸರಕಾರದ ಅವಧಿ ಮುಗಿಯುವವರೆಗೂ ಸಿಎಂ ಬದಲಾವಣೆ ಇಲ್ಲ. ಈಗಾಗಲೇ ಅಮಿತ್ ಶಾ, ಅರುಣ್ ಸಿಂಗ್ ಇದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿಲ್ಲ, ಅವರೇ ರಾಜೀನಾಮೆ ನೀಡಿದ್ದಾರೆ ಎಂದರು.
ಪಕ್ಷದ ಆಂತರಿಕ ವಿಚಾರಗಳನ್ನು ಹಾದಿ ಬೀದೀಲಿ ಮಾತನಾಡಬಾರದು. ಸಚಿವ ಸ್ಥಾನದ ಆಕಾಂಕ್ಷಿಗಳು ಪಕ್ಷದ ಘನತೆಗೆ ಅಡ್ಡಿಯಾಗುವ ಹೇಳಿಕೆಗಳನ್ನು ನೀಡಬಾರದು ಎಂದು ಪರೋಕ್ಷವಾಗಿ ಸ್ವಪಕ್ಷೀಯ ಶಾಸಕರಾದ ರೇಣುಕಾಚಾರ್ಯ, ಬಸನಗೌಡ ಯತ್ನಾಳ ಹಾಗೂ ಸೋಮಶೇಖರ್ ರಡ್ಡಿ ವಿರುದ್ಧ ವಾಗ್ದಾಳಿ ನಡೆಸಿದರು.
ಬಿ.ಸಿ.ಪಾಟೀಲ ಫೋಟೋ ಶೂಟ್‌ನಲ್ಲಿ ಬ್ಯುಜಿಯಾಗಿದ್ದಾರೆ ಎಂಬ ಕಾಂಗ್ರೆಸ್‌ನ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಕೃಷಿ ಚಟುವಟಿಕೆಗಳ ಉತ್ತೇಜನಕ್ಕಾಗಿ ಫೋಟೋ ತೆಗೆಸಿಕೊಂಡಿದ್ದರಲ್ಲಿ ತಪ್ಪೇನಿದೆ. ಅದೇನು ನಾಟಕೀಯ ಅಲ್ಲ, ವಾಸ್ತವ. ನಾನೇನು ಕಿಕ್ ಬ್ಯಾಕ್ ಪಡೆದಿಲ್ಲ. ಕಾಂಗ್ರೆಸ್‌ನವರಿಗೆ ಉತ್ತರ ಕೊಡುವ ಅಗತ್ಯ ಇಲ್ಲ ಎಂದು ಅವರು ಉತ್ತರಿಸಿದರು.