ಜ.ಫಕ್ಕೀರೇಶ್ವರ ವಾಣಿಯಂತೆ ದಿಂಗಾಲೇಶ್ವರ ಶ್ರೀಗಳಿಗೆ ಉತ್ತರಾಧಿತ್ವ!
ವಿಜಯಸಾಕ್ಷಿ ಸುದ್ದಿ, ಗದಗ:
ನಾಡಿನ ಧರ್ಮ ಪ್ರವರ್ತರು, ಪ್ರವಚನ ಪ್ರವೀಣರು, ಚತುರವಾಗ್ಮಿ ಬಾಲೆಹೊಸೂರಿನ ಶ್ರೀ ಕುಮಾರ ದಿಂಗಾಲೇಶ್ವರ ಮಹಾಸ್ವಾಮಿಗಳು ನಾಡಿನ ಭಾವೈಕ್ಯತೆಯ ಪ್ರತೀಕವಾಗಿರುವ ಶಿರಹಟ್ಟಿಯ ಸಂಸ್ಥಾನ ಮಠದ ಉತ್ತರಾಧಿಕಾರಿಗಳಾಗಿರುವುದು ಉಭಯ ಮಠಗಳ ಭಕ್ತರಲ್ಲಿ ಸಂಚಲನ ಮೂಡಿಸಿದೆ.
ಶಿರಹಟ್ಟಿಯ ಸಂಸ್ಥಾನಮಠದ ಜ.ಫಕ್ಕೀರ ಸಿದ್ಧರಾಮೇಶ್ವರ ಮಹಾಸ್ವಾಮಿಗಳಿಗೆ 74ರ ಇಳಿವಯಸ್ಸು, ಆರೋಗ್ಯವೂ ಕೊಂಚ ಕ್ಷೀಣಿಸಿದೆ. ಶಿರಹಟ್ಟಿ ಸೇರಿ ನಾಡಿನಾದ್ಯಂತ ಇರುವ 60ಕ್ಕೂ ಹೆಚ್ಚು ಶಾಖಾ ಮಠಗಳು, ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸಿಕೊಂಡು ಹೋಗುವುದು ಕಷ್ಟಸಾದ್ಯ. ಶ್ರೀಮಠವನ್ನು ಅತ್ಯಂತ ಪ್ರಗತಿಪತದತ್ತ ಕೊಂಡ್ಯುಯುವ ಸಾಮರ್ಥ್ಯ, ಪ್ರಬುದ್ಧತೆ ಹೊಂದಿರುವ ಮಗನಂತೆ ಕಂಡಿರುವ ದಿಂಗಾಲೇಶ್ವರರಿಗೆ ಮಠದ ಅಧಿಕಾರ ಹಸ್ತಾಂತರಿಸಿ ಆಶೀರ್ವದಿಸುವಂತೆ ಕರ್ತ್ರು ಶ್ರೀ ಜ.ಫಕ್ಕೀರೇಶ್ವರರಿಂದ ವಾಣಿಯಾಗಿದೆ ಎಂದು ಈಗಿನ ಸಿದ್ಧರಾಮ ಶ್ರೀಗಳು ಹೇಳುತ್ತಾರೆ. ಈ ಹಿನ್ನೆಲೆ ಗುರುವಾರ ಶ್ರೀಮಠದ ಹಿರಿಯ ಭಕ್ತರ ಸಮ್ಮುಖದಲ್ಲಿ ಕಾನೂನುಬದ್ಧ, ಸಂಪ್ರದಾಯಬದ್ಧ ವಿಧಿ ವಿಧಾನಗಳನ್ನು ಪೂರ್ಣಗೊಳಿಸಲಾಗಿದೆ.
ಉತ್ತರಾಧಿಕಾರಕ್ಕಾಗಿ ಶಿರಹಟ್ಟಿ ಮಠದಲ್ಲಿ ನಡೆದದ್ದೇನು?
ಶಿರಹಟ್ಟಿ ಮಠದಲ್ಲಿ ಗುರುವಾರ ಬೆಳಗ್ಗೆಯಿಂದಲೇ ಎಲ್ಲ ರೀತಿಯ ಪ್ರಕ್ರಿಯೆಗಳು ನಡೆದಿವೆ. ಮಠದ ಕರ್ತ್ರು ಗದ್ದುಗೆಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಶಿರಹಟ್ಟಿಯ ಶ್ರೀಗಳು ಶ್ರೀಮಠದ ಪರಂಪರೆಯಂತೆ ದಿಂಗಾಲೇಶ್ವರರಿಗೆ ಉಡದಾರ ಕಟ್ಟುವ ಉತ್ತರಾಧಿಕಾರ ಪ್ರಕ್ರಿಯೆ ಚಾಲನೆಗೊಂಡಿತು. ನಗಾರಿಖಾನೆಯಲ್ಲಿ ಮುಸ್ಲಿಂ ಸಂಪ್ರದಾಯದ ಪ್ರಕ್ರಿಯೆ ನೆರವೇರಿಸಿ ನಂತರ ಮಠದಲ್ಲಿರುವ ಲಕ್ಷ್ಮೀದೇವಿ, ಚೌಡಮ್ಮದೇವಿ ದರ್ಶನ ಪಡೆದು ನಂತರ ಸೇರಿದ್ದ ಭಕ್ತರಿಗೆ ಆಶೀರ್ವಚನ ನೆರವೇರಿಸಲಾಯಿತು.
ಎಲ್ಲ ಪ್ರಕ್ರಿಯೆಗಳು ನಡೆಯವ ವೇಳೆ ಫಕ್ಕೀರೇಶ್ವರರ ಮಹಿಮೆಯೂ ಎನ್ನುವಂತೆ ಕಾಕತಾಳೀಯವಾಗಿ ಅಲಂಕೃತ ಆನೆ, ಮದುವೆ ಕಾರ್ಯಕ್ರಮದ ಹಿನ್ನೆಲೆ ಮಠದಲ್ಲಿ ಗುಗ್ಗಳ, ಪೂರ್ಣಕುಂಭದ ಜತೆಗೆ ಮೊಳಗಿದ ಸಕಲ ವಾದ್ಯಗಳು ಮೊಳಗಿದ್ದು, ಪವಾಡವೇ ನಡೆಯಿತು ಎಂದು ಭಕ್ತರು ಮಾತನಾಡಿಕೊಂಡರು. ಬಳಿಕ ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ತಾಲೂಕಿನ ಹಿರಿಯ ಭಕ್ತರ ಒಮ್ಮತದ ತೀರ್ಮಾನ, ಪಾಲ್ಗೊಳ್ಳುವಿಕೆಯೊಂದಿಗೆ ಸಬ್ ರೆಜಿಸ್ಟರ್ ಕಚೇರಿಯಲ್ಲಿ ಉತ್ತರಾಧಿಕಾರದ ನೋಂದಣಿ ಮಾಡಿಸಲಾಯಿತು.
ಬಾಲೆಹೊಸೂರ ಮಠದಲ್ಲಿ
ಶಿರಹಟ್ಟಿಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಬಾಲೆಹೊಸೂರ ಮಠದಲ್ಲಿ ಗ್ರಾಮದ ಭಕ್ತರ ಸಭೆ ಮಾಡಿ ದಿಂಗಾಲೇಶ್ವರ ಶ್ರೀಗಳನ್ನು ಶಿರಹಟ್ಟಿ ಮಠದ ಉತ್ತರಾಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಇನ್ನು ಮುಂದೆ ಶಿರಹಟ್ಟಿ ಮತ್ತು ಬಾಲೆಹೊಸೂರಿನ ಎರಡೂ ಮಠಗಳ ಜವಾಬ್ದಾರಿ ಅವರದ್ದಾಗಿದೆ. ಈ ಬಗ್ಗೆ ಗ್ರಾಮಸ್ಥರಲ್ಲಿ ಯಾವುದೇ ಆತಂಕ, ಅನುಮಾನ ಬೇಡ ದಿಂಗಾಲೇಶ್ವರರಿಗೆ ಆ ಶಕ್ತಿ, ಸಾಮರ್ಥ್ಯವಿದ್ದು ಅವರ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕಾರ್ಯ ಇಡೀ ನಾಡಿನಾದ್ಯಂತ ಪಸರಿಸಲಿ ಎಲ್ಲರೂ ಆತ್ಮಸಂತೋಷ, ಅಭಿಮಾನದಿಂದ ಒಪ್ಪಿಕೊಳ್ಳಿ ಎಂದು ಭಿನ್ನಹ ಮಾಡಿದರು. ಇದಕ್ಕೆ ಪೂರಕವಾಗಿ ಮಾಜಿ ಶಾಸಕ ಜಿ.ಎಸ್.ಗಡ್ಡದೇವರಮಠ, ಜಿ.ಎಂ,ಮಹಾಂತಶೆಟ್ಟರ, ದೇವಣ್ಣ ಬಳಿಗಾರ, ಶಿರಹಟ್ಟಿ ಚಂದ್ರಣ್ಣ ನೂರಶೆಟ್ಟರ, ಹುಮಾಯೂನ್ ಮಾಗಡಿ, ಶಿವಪ್ರಕಾಶ ಮಹಾಜನಶೆಟ್ಟರ, ವೈ.ಎಸ್.ಪಾಟೀಲ, ಶಿವಲಿಂಗಯ್ಯ ಶಿವಯೋಗಿಮಠ, ಮಂಜುನಾಥ ಘಂಟಿ, ಕೆ.ಎ.ಬಳಿಗೇರ ಧ್ವನಿ ಗೂಡಿಸಿದರು.
ಈ ಗ್ರಾಮದ ಹಿರಿಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಗ್ರಾಮದ ಜನತೆಗೆ ಒಂದೆಡೆ ನಮ್ಮ ಶ್ರೀಗಳು ಶಿರಹಟ್ಟಿ ಮಠಕ್ಕೆ ಉತ್ತರಾಧಿಕಾರಿಗಳಾಗುವುದು ಸಂತೋಷವಾಗಿದ್ದರೂ ಮತ್ತೊಂದೆಡೆ ನಮ್ಮಿಂದ ದೂರವಾಗುತ್ತಾರೆಂಬ ಎಂಬ ನೋವು ಕಾಡುತ್ತಿದೆ. ಶ್ರೀಗಳು, ಹಿರಿಯರ ನಿರ್ಧಾರಕ್ಕೆ ಬದ್ಧರಾಗುತ್ತೇವೆ ಎಂದು ಗಳಗಳನೇ ಅತ್ತದ್ದನ್ನು ಕಂಡ ದಿಂಗಾಲೇಶ್ವರ ಶ್ರೀಗಳು ಸಣ್ಣ ಮಗುವಿನಂತೆ ಕಣ್ಣೀರು ಸುರಿಸಿ ಎಲ್ಲರ ಕಣ್ಣಂಚಲ್ಲಿ ನೀರು ತರಿಸಿತ್ತು.
ಎರಡು ಮಹಾನದಿಗಳು ಒಂದಾಗಿ ತ್ರಿವೇಣಿ ಸಂಗಮವಾಗುವಂತೆ ಎರಡೂ ಮಠಗಳ ಕೀರ್ತಿಯನ್ನು ಹೆಚ್ಚಿ ಭಾವೈಕ್ಯತೆ ಮೇಳೈಸಲಿದೆ. ಕರ್ತ್ರು ಫಕ್ಕೀರೇಶ್ವರರ ವಾಣಿಯಾಗಿದೆಯಲ್ಲದೇ ನಮ್ಮ ಮತ್ತು ಭಕ್ತರ ಮನಸ್ಸಿನ ಒಮ್ಮತದ ಭಾವನೆಯೂ ಆಗಿದೆ. ಜ್ಞಾನಸೂರ್ಯ ಸ್ವರೂಪಿಯಾಗಿರುವ ದಿಂಗಾಲೇಶ್ವರ ಕೀರ್ತಿ ನಾಡಿನಾದ್ಯಂತ ಪಸರಿಸಲಿ. ಅವರಿಗೆ ಸ್ನೇಹ-ಪ್ರೀತಿ, ಶಾಂತಿ, ಸಮಾಧಾನ. ಭಾವೈಕ್ಯತೆಯ ಫಕ್ಕೀರೇಶ್ವರರ ಗುಣಗಳನ್ನು ಆಶೀರ್ವದಿಸುತ್ತೇನೆ. ಶಿರಹಟ್ಟಿಯ ಸಂಪ್ರದಾಯದಂತೆ ಶ್ರೀ ಫಕ್ಕೀರ ದಿಂಗಾಲೇಶ್ವರ ಸ್ವಾಮಿಗಳು ಉತ್ತರಾಧಿಕಾರಿಗಳು ಶ್ರೀ.ಜ.ಫಕ್ಕೀರೇಶ್ವರ ಸಂಸ್ಥಾನಮಠ ಶಿರಹಟ್ಟಿ(ಕಿರಿಯ ಸ್ವಾಮಿಗಳು) ಎಂಬ ಅಭಿನಾಮದಿಂದ ಕರೆಯಿಸಿಕೊಳ್ಳಲಿದ್ದಾರೆ. ನಮ್ಮ ನಂತರ ಅವರು ಶ್ರೀ ಜ.ಫಕ್ಕೀರ ಶಿವಯೋಗಿ ಸ್ವಾಮಿಗಳು ೧೪ನೇ ಪಟ್ಟಾಧ್ಯಕ್ಷರು ಶ್ರೀ.ಜ.ಫಕ್ಕೀರೇಶ್ವರ ಸಂಸ್ಥಾನಮಠ ಶಿರಹಟ್ಟಿ ಎಂದು ಬೆಳಗಲಿದ್ದಾರೆ.
ಫಕ್ಕೀರ ಸಿದ್ಧರಾಮ ಶ್ರೀಗಳು, ಸಂಸ್ಥಾನಮಠ ಶಿರಹಟ್ಟಿ
ಶ್ರೀ ಫಕ್ಕೀರ ಸಿದ್ಧರಾಮ ಶ್ರೀಗಳು ತಮ್ಮ ಬುದ್ಧಿಶಕ್ತಿ, ಅಂತಃಕರಣ, ಅಂತಃಶಕ್ತಿಯಿಂದ ಕೈಗೊಳ್ಳುವ ತೀರ್ಮಾನ, ಮಠಗಳ ಭಕ್ತರ ಅಭಿಲಾಷೆ, ಹಿರಿಯರ ನಿರ್ಧಾರದಿಂದ ಕೈಗೊಂಡ ತೀರ್ಮಾನಕ್ಕೆ ಬದ್ಧನಾಗಿ ನಡೆದುಕೊಳ್ಳುತ್ತೇನೆ. ಬಾಲೇಹೊಸೂರ ನನ್ನ ತವರು ಮನೆಯಾಗಿದ್ದು ೨ ದಶಕಗಳ ಕಾಲ ಶ್ರೀಮಠ ಅಭಿವೃದ್ಧಿಗಾಗಿ ಬೆವರು ಸುರಿಸಿದ್ದೇನೆ. ಇಲ್ಲಿನ ಜನರ ಪ್ರೀತಿ, ವಿಶ್ವಾಸ, ಸಹಕಾರಕ್ಕೆ ಜನ್ಮಪೂರ್ತಿ ಋಣಿಯಾಗಿರುವೆ. ಜೀವ ಇರೋವರೆಗೂ ಎರಡೂ ಮಠಗಳನ್ನು ಬೆಳೆಸುವ ಕಾರ್ಯ ಮಾಡುತ್ತೇನೆ
ದಿಂಗಾಲೇಶ್ವರ ಶ್ರೀಗಳು, ಬಾಲೆಹೊಸೂರು